ಬೆಳಗಾವಿ ತಾಲೂಕಿನ ಬಡೇಕೊಳ್ಳಮಠ ಕ್ರಾಸ್ ಕಣಿವೆಯಲ್ಲಿನ ಅಪಾಯಕಾರಿ ಹೆದ್ದಾರಿ.
ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಹಾದು ಹೋಗಿರುವ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ 60 ಕಿ.ಮೀ. ವ್ಯಾಪ್ತಿಯ ಪ್ರದೇಶ ಅಕ್ಷರಶಃ ವಾಹನ ಸವಾರರಿಗೆ ಅಪಾಯಕಾರಿಯಾಗಿದೆ. ಈ ಭಾಗದಲ್ಲಿ ವಿಶಾಲ ರಸ್ತೆಯಿದ್ದು, ಆಗಾಗ ಕೋಟ್ಯಂತರ ರೂಪಾಯಿ ವ್ಯಯಿಸಿ ಸುಧಾರಣೆ ಕಾಮಗಾರಿ ಕೈಗೊಂಡರೂ ಏಕಾಏಕಿ ಎದುರಾಗುವ ಕಣಿವೆ, ತಿರುವುಗಳಿಂದ ಅಪಘಾತಗಳು ಘಟಿಸಿ ಸಾವು, ನೋವು, ನರಳಾಟ ತಪ್ಪುತ್ತಿಲ್ಲ.
ಚನ್ನಮ್ಮನ ಕಿತ್ತೂರಿನಿಂದ ವಂಟಮುರಿ ಘಾಟ್ ದಾಟುವವರೆಗಿನ 60 ಕಿ.ಮೀ. ಅಂತರದಲ್ಲಿ ಹಲವೆಡೆ ಅಪಘಾತದ ಬ್ಲಾೃಕ್ ಸ್ಪಾಟ್‌ಗಳಿವೆ. ಚನ್ನಮ್ಮನ ಕಿತ್ತೂರು, ಹಿರೇಬಾಗೇವಾಡಿ, ಕಾಕತಿ ಠಾಣೆ ಪೈಕಿ ಒಂದು ಸ್ಥಳದಲ್ಲಿ ನಿತ್ಯವೂ ಅಪಘಾತ ಸಾಮಾನ್ಯ ಎನ್ನುವಂತಾಗಿದೆ.
ಕಾಕತಿ ವ್ಯಾಪ್ತಿಯ ವಂಟಮುರಿ ಘಾಟ್‌ನ (ರಾಮಧಾಬಾ ಬಳಿ) ನೇರವಾದ ರಸ್ತೆಯಲ್ಲಿ ಎದುರಾಗುವ ಏಕಾಏಕಿ ತಿರುವಿನ ಅರಿವಿಲ್ಲದೇ ಚಾಲಕರಿಂದ ನಿಯಂತ್ರಣ ತಪ್ಪುವ ವಾಹನಗಳು ರಸ್ತೆ ಪಕ್ಕ ಉರುಳಿ ಬೀಳುವುದು ಹೆಚ್ಚು. ಬೆಳಗಾವಿ ಕಡೆಯಿಂದ ಯಮಕನಮರಡಿಯತ್ತ ಸಾಗುವಾಗ ಏಕಾಏಕಿ ಬಲ ತಿರುವು ಹಾಗೂ ಎದುರು ದಿಕ್ಕಿನಲ್ಲಿ ಬೆಳಗಾವಿ ಕಡೆಗೆ ಬರುವವರು ಎಡ ತಿರುವು ತೆಗೆದುಕೊಳ್ಳಬೇಕು. ಗುಡ್ಡವನ್ನು ಸುತ್ತುವರಿದ ರಸ್ತೆಯಾಗಿರುವ ಕಾರಣಕ್ಕೆ ಅಪಾಯಕಾರಿ ತಿರುವು ಇದೆ. ಇದರಿಂದ ವಾಹನ ನಿಯಂತ್ರಣ ತಪ್ಪುವ ಸಾಧ್ಯತೆ ಹೆಚ್ಚಾಗಿದೆ.
ಠಾಣೆ ಎದುರು ಜವರಾಯ: ಕಾಕತಿ ಠಾಣೆ ಎದುರು ಸದಾಕಾಲ ಜವರಾಯ ಕಾದುಕುಳಿತಿರುತ್ತಾನೆ. ಹೆದ್ದಾರಿ ಮಧ್ಯದಲ್ಲಿ ಬ್ಯಾರಿಕೇಡ್ ಇದ್ದರೂ ಜನ ಕೇಳಸೇತುವೆ ಬಳಸದೆ ರಸ್ತೆ ಮೇಲೆಯೇ ಓಡಾಡುತ್ತಾರೆ. ವಿದ್ಯುತ್ ದೀಪವೂ ಇಲ್ಲ. ರಾತ್ರಿ ಕತ್ತಲು ಆವರಿಸಿರುತ್ತದೆ. ವೇಗವಾಗಿ ಹೋಗುವ ವಾಹನಗಳಿಗೆ ಏಕಾಏಕಿ ರಸ್ತೆಗೆ ಇಳಿದ ಜನ ಬಲಿಯಾಗುತ್ತಿದ್ದಾರೆ.
ಉರುಳಿ ಬೀಳುವ ವಾಹನ: ಹೊನಗಾ ಬಳಿ ರಸೋಯಿ ಹೋಟೆಲ್ ಎದುರಿನಲ್ಲಿ ವೇಗವಾಗಿ ಬರುವ ವಾಹನಗಳು ಮಗುಚಿಬೀಳುವುದು ಹೆಚ್ಚು. ಇಲ್ಲಿರುವ ವೃತ್ತ ತಗ್ಗು ಪ್ರದೇಶದಲ್ಲಿದೆ. ಕೈಗಾರಿಕಾ ಪ್ರದೇಶಕ್ಕೆ ತೆರಳುವ ಹಾಗೂ ಅಲ್ಲಿಂದ ಮುಖ್ಯ ರಸ್ತೆ ಸೇರುವ ವಾಹನಗಳು ಇಲ್ಲಿ ಕ್ರಾಸ್ ಮಾಡುತ್ತವೆ. ಈ ಸಂದರ್ಭದಲ್ಲಿ ಮುಖ್ಯ ರಸ್ತೆಯಲ್ಲಿ ವೇಗವಾಗಿ ಬರುವ ವಾಹನಗಳು ಕಾಣುವುದಿಲ್ಲ. ಹೀಗಾಗಿ, ಪರಸ್ಪರ ಡಿಕ್ಕಿ ಅಥವಾ ಡಿಕ್ಕಿ ತಪ್ಪಿಸಲು ಹೋಗಿ ವಾಹನಗಳು ಅಪಘಾತವಾಗುವುದು ಸಾಮಾನ್ಯವಾಗಿದೆ.
ಅಪಾಯಕಾರಿ ಕಣಿವೆ: ಬೆಳಗಾವಿ-ಹಿರೇಬಾಗೇವಾಡಿ ಮಧ್ಯದ ಬಡೇಕೊಳ್ಳಮಠ ಕಣಿವೆ ಅತ್ಯಂತ ಅಪಾಯಕಾರಿ ಎಂಬ ಕುಖ್ಯಾತಿ ಪಡೆದಿದೆ. ಬೆಳಗಾವಿ ಕಡೆಯಿಂದ ಇಳಿಜಾರು, ಬಾಗೇವಾಡಿ ಕಡೆಯಿಂದ ಏರುಪಥ ಇಲ್ಲಿದೆ. ಬಡೇಕೊಳ್ಳಮಠ ಕ್ರಾಸ್ ದಾಟಿ ಹಿರೇಬಾಗೇವಾಡಿಯತ್ತ ಮುಂದೆ ಸಾಗುತ್ತಿದ್ದಂತೆ ಏಕಾಏಕಿ ತಿರುವು ಇದೆ. ಇಳಿಜಾರಿನಲ್ಲಿ ವೇಗವಾಗಿ ಬರುವ ವಾಹನಗಳು ನಿಯಂತ್ರಣಕ್ಕೆ ಸಿಗದೆ ತಡೆಗೋಡೆಗೆ ಗುದ್ದಿ ಉರುಳಿ ಬಿದ್ದ ಉದಾಹರಣೆಗಳು ಬಹಳಷ್ಟಿವೆ. ಈ ಸ್ಥಳದಲ್ಲಿ ಬೈಕ್ ಸವಾರರೂ ಜೀವ ಕಳೆದುಕೊಂಡಿದ್ದಾರೆ.
ಎಚ್ಚರಿಸುವ ರಿಪ್ಲೆಕ್ಟರ್‌ಗಳು, ಕೆಂಪುಬಣ್ಣದ ತಡೆಗಳನ್ನು ಅಲ್ಲಲ್ಲಿ ಹಾಕಿದ್ದರೂ, ಅಪಘಾತಗಳು ಮಾತ್ರ ಕಡಿಮೆಯಾಗಿಲ್ಲ. ಈ ಸಲದ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಭೂಕುಸಿತವಾಗಿದ್ದು, ಅಪಾಯ ಮತ್ತಷ್ಟು ಹೆಚ್ಚಿದೆ. ವಾಹನ ಸವಾರರ ಪಾಲಿಗೆ ಮೃತ್ಯುಕೂಪವಾಗಿರುವ ಈ ರಸ್ತೆ ಸುಧಾರಣೆಗೆ ಕ್ರಮಕೈಗೊಳ್ಳುವುದು ಅಗತ್ಯವಾಗಿದೆ.
ಇಲ್ಲಿನ ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಪುಣೆ-ಬೆಂಗಳೂರು ಹೆದ್ದಾರಿ ಮೃತ್ಯುಕೂಪವಾಗಿದೆ. ಕಳೆದ ಮೂರು ವರ್ಷದಲ್ಲಿ ಈ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 303 ಅಪಘಾತಗಳಾಗಿದ್ದು, ಒಟ್ಟು 88 ಸಾವು, 354 ಜನ ಗಾಯಗೊಂಡಿದ್ದಾರೆ. ಈ ಪೈಕಿ ಅತಿ ಹೆಚ್ಚು ಅಪಘಾತಗಳಾಗಿರುವುದು ವಂಟಮುರಿ ಘಾಟ್ ಮತ್ತು ಕಾಕತಿ ಠಾಣೆ ಎದುರಿನಲ್ಲಿ.
10 ವರ್ಷದಲ್ಲಿ 19 ಬಲಿ
ಹಿರೇಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬಡೇಕೊಳ್ಳಮಠ ಘಾಟ್‌ನಲ್ಲಿ ಕಳೆದ ಹತ್ತು ವರ್ಷದಲ್ಲಿ 45 ಅಪಘಾತಗಳಾಗಿದ್ದು, 19 ಜನ ಸಾವಿಗೀಡಾಗಿ, 89 ಜನ ಗಾಯಗೊಂಡಿದ್ದಾರೆ. ಇದರ ಹೊರತಾಗಿ ವಾಹನ ಪಲ್ಟಿಯಾಗಿ ಸವಾರರು ಗಾಯಗಳಾಗಿರುವ ಹಲವು ಪ್ರಕರಣಗಳು ನಡೆದಿವೆ.