ಹುಕ್ಕೇರಿ ತಾಲೂಕಿನ ಸಂಕೇಶ್ವರ ಪುರಸಭೆಯು ಖಾಲಿ ಪ್ರದೇಶಗಳಲ್ಲಿ ಸಸಿಗಳನ್ನು ನೆಟ್ಟಿದೆ.
ನಗರೀಕರಣದ ಭರಾಟೆಯಲ್ಲಿ ಕಳೆದುಹೋಗುತ್ತಿರುವ ಹಸಿರಿಗೆ ಮತ್ತೆ ಜೀವ ತುಂಬುವ ನಿಟ್ಟಿನಲ್ಲಿ ಅಂದಾಜು 40ಸಾವಿರಕ್ಕೂ ಅಧಿಕ ಸಸಿಗಳನ್ನು ನೆಡುವ ಮೂಲಕ ವಿನೂತನ ಪ್ರಯೋಗಕ್ಕೆ ನಗರ ಸ್ಥಳೀಯ ಸಂಸ್ಥೆಗಳು ನಾಂದಿ ಹಾಡಿವೆ.
ಹೌದು. ತಾಪಮಾನ ಏರಿಕೆ ನಿಯಂತ್ರಣ, ವಾತಾವರಣದ ಗುಣಮಟ್ಟ ಸುಧಾರಣೆ ಹಾಗೂ ನಗರ ಪ್ರದೇಶಗಳಲ್ಲಿ ಹಸಿರು ಹೊದಿಕೆ ಹೆಚ್ಚಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಮಿಯಾವಾಕಿ ಕಿರು ಅರಣ್ಯ ಯೋಜನೆಗೆ ಒತ್ತು ನೀಡಲಾಗಿದೆ. ನಗರದ ಖಾಲಿ ಜಾಗಗಳನ್ನೇ ದಟ್ಟ ಹಸಿರು ತಾಣಗಳನ್ನಾಗಿ ಪರಿವರ್ತಿಸುವ ಉದ್ದೇಶದಿಂದ ಜಿಲ್ಲೆಯ 38 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 40 ಸಾವಿರಕ್ಕೂ ಅಧಿಕ ಸಸಿಗಳನ್ನು ನೆಟ್ಟಿವೆ.
ಪ್ರಸಕ್ತ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದು ಸಸಿ ನೆಡುವಿಕೆ ಹಾಗೂ ನಿರ್ವಹಣೆಗೆ ಸವಾಲಾಗಿದೆ. ಹೀಗಾಗಿ ನೀರಿನ ಲಭ್ಯತೆ ಆಧರಿಸಿ ಸದ್ಯ ಆಯಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 800 ರಿಂದ 1ಸಾವಿರ ಸಸಿಗಳವರೆಗೆ ನೆಡಲಾಗುತ್ತಿದೆ.ಆದರೂ, ಯೋಜನೆಯ ಅಂತಿಮ ಗುರಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಮುಂದಿನ ಒಂದು ವರ್ಷದೊಳಗೆ ಜಿಲ್ಲೆಯಲ್ಲಿ 2 ಲಕ್ಷಕ್ಕೂ ಅಧಿಕ ಸಸಿಗಳನ್ನು ನೆಟ್ಟು ಬೆಳೆಸುವ ಗುರಿ ಹೊಂದಲಾಗಿದೆ.
ಈಗಾಗಲೇ ರಾಜ್ಯ ಸರ್ಕಾರವು ಮಿಯಾವಾಕಿ ಕಿರು ಅರಣ್ಯ ಅಭಿವೃದ್ಧಿ ಯೋಜನೆಯಡಿ ಪ್ರತಿ ಎಕರೆಗೆ 14 ಲಕ್ಷ ಅನುದಾನ ನೀಡುತ್ತಿದೆ. ಉದ್ಯಾನವನ, ಸರ್ಕಾರಿ ಜಾಗ ಹಾಗೂ ಸಾರ್ವಜನಿಕ ಬಳಕೆಯ ಖಾಲಿ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಕಿರು ಅರಣ್ಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನುತ್ತಾರೆ ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು.
ನೆಟ್ಟ ಗಿಡ ಉಳಿಸುವುದಕ್ಕೂ ಒತ್ತು
ಸಸಿ ನೆಡುವುದರೊಂದಿಗೆ ಯೋಜನೆ ಮುಗಿಯುವುದಿಲ್ಲ. ನೆಟ್ಟ ಗಿಡಗಳ ಸಂರಕ್ಷಣೆ ಮತ್ತು ಪೋಷಣೆಗೆ ಕೂಡ ವ್ಯವಸ್ಥೆ ಮಾಡಲಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ಖಾಸಗಿ ಸಂಸ್ಥೆಗಳು ಹಾಗೂ ಸಂಘ-ಸಂಸ್ಥೆಗಳು ಸಸಿಗಳ ಪಾಲನೆಗೆ ಮುಂದಾಗಲಿದ್ದು, ಅಗತ್ಯವಿರುವ ಕಡೆ ನಗರ ಸ್ಥಳೀಯ ಸಂಸ್ಥೆಗಳು ನಿರ್ವಹಣೆಗೆ ಅನುದಾನ ಮೀಸಲಿಡಲಿವೆ.ಸಸಿಗಳ ರಕ್ಷಣೆ, ನೀರು ಪೂರೈಕೆ ಹಾಗೂ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿದೆಯೇ ಎಂಬುದನ್ನು ಆಯಾ ನಗರ ಸ್ಥಳೀಯ ಸಂಸ್ಥೆಗಳ ಪರಿಸರ ವಿಭಾಗದ ಅಧಿಕಾರಿಗಳು ಮೇಲ್ವಿಚಾರಣೆ ಮಾಡಲಿದ್ದಾರೆ.
ಕಾಂಕ್ರೀಟ ಕಟ್ಟಡಗಳ ನಡುವೆ ಖಾಲಿ ಜಾಗಗಳಲ್ಲಿ ಬೆಳೆಯಲಿರುವ ಈ ಕಿರು ಅರಣ್ಯಗಳು ಮುಂದಿನ ದಿನಗಳಲ್ಲಿ ನಗರದ ತಾಪಮಾನ ತಗ್ಗಿಸುವ ಹಸಿರು ಉಸಿರುಗಟ್ಟೆಗಳಾಗಿ ರೂಪುಗೊಳ್ಳುವ ನಿರೀಕ್ಷೆ ಮೂಡಿಸಿದೆ. ಬೆಳಗಾವಿ ಜಿಲ್ಲೆಯ ನಗರ ಪ್ರದೇಶಗಳಲ್ಲಿ ಮಿಯಾವಾಕಿ ಮಾದರಿಯ ಈ ಪ್ರಯತ್ನ ಯಶಸ್ವಿಯಾದರೆ, ಖಾಲಿ ಜಾಗಗಳ ಬಳಕೆಯ ಜತೆಗೆ ಪರಿಸರ ಸಂರಕ್ಷಣೆಯಲ್ಲೂ ಹೊಸ ಮಾದರಿಯಾಗಲಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬಾರಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಉದ್ಯಾನವನ, ಖಾಲಿ ಪ್ರದೇಶಗಳಲ್ಲಿ 2ಲಕ್ಷಕ್ಕೂ ಅಧಿಕ ಸಸಿಗಳನ್ನು ನೆಡುವ ಗುರಿ ಹಾಕಿಕೊಂಡಿದ್ದೇವೆ. ಮಳೆ, ನೀರಿನ ಲಭ್ಯತೆ ಆಧಾರದ ಮೇಲೆ ಸಸಿಗಳನ್ನು ನೆಟ್ಟಿದ್ದು, ಅವುಗ ಪೋಷಣೆ ಸಂಘ ಸಂಸ್ಥೆಗಳಿಗೆ ಜವಾಬ್ದಾರಿ ವಹಿಸಲಾಗಿದೆ.
- ಮೊಹಮ್ಮದ ರೋಷನ್, ಜಿಲ್ಲಾಧಿಕಾರಿ