ಸೇವಾ ಭದ್ರತೆಗೆ ಒತ್ತಾಯಿಸಿ ಸುವರ್ಣ ಗಾರ್ಡನ್‌ನಲ್ಲಿ ವಿಕಲಚೇತನ ಗೌರವಧನ ಕಾರ್ಯಕರ್ತರ ಸಂಘದ ವತಿಯಿಂದ ಸೋಮವಾರ ಪ್ರತಿಭಟಿಸಲಾಯಿತು. ಕೀರಗೌಡ ಪಾಟೀಲ, ಅಂಭಾಜಿ ಮೇಟಿ, ಚಂದ್ರಯ್ಯ ಕೆ.ಎಸ್. ಇತರರಿದ್ದರು.
- 10ಕ್ಕೂ ಅಧಿಕ ಸಂಘಟನೆಗಳ ಧರಣಿ
- ಸಚಿವ ಮುನಿಯಪ್ಪ ಮನವಿ ಸ್ವೀಕಾರ
ಬೆಳಗಾವಿ: ಚಳಿಗಾಲ ಅಧೀವೇಶನ ಹಿನ್ನಲೆ ಇಲ್ಲಿನ ಸುವರ್ಣ ವಿಧಾನ ಸೌಧದ ಬಳಿಯಿರುವ ಸುವರ್ಣ ಗಾರ್ಡನ್‌ನಲ್ಲಿ ಸೋಮವಾರವೂ ಸಾಲು ಸಾಲು ಪ್ರತಿಭಟನೆಗಳು ನಡೆದವು. ಕಲಾವಿದರ ಸಂಘ, ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘ ಸೇರಿ 10ಕ್ಕೂ ಅಧಿಕ ಸಂಘಟನೆಗಳಿಂದ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದವು. ಸರ್ಕಾರದ ಪರ ಆಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಮನವಿ ಆಲಿಸಿದರು.
ವಯಸ್ಸಿನ ಮಿತಿ ಇಳಿಸಲು ಒತ್ತಾಯ: ಕಲಾವಿದರ ಮಸಾಶನ ವಯಸ್ಸನ್ನು ಈಗಿರುವ 58ರ ನಿಯಮ ಸಡಿಲಿಸಿ 50ಕ್ಕೆ ಇಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಕಲಾವಿದರ ಸಾಂಸ್ಕೃತಿಕ ಸಂಘಟನೆಯಿಂದ ಪ್ರತಿಭಟಿಸಲಾಯಿತು.
ಕಲಾವಿದರಿಗೆ ನೀಡುತ್ತಿರುವ 2,500 ಮಸಾಶನವನ್ನು 5 ಸಾವಿರ ರೂ.ಗೆ ಹೆಚ್ಚಿಸಬೇಕು, ಪ್ರತ್ಯೇಕ ಬೀದಿನಾಟಕ ಅಕಾಡೆಮಿ ಸ್ಥಾಪನೆ, ವಿವಿಧ ಇಲಾಖೆ ಮೂಲಕ ಹೆಚ್ಚಿನ ಬೀದಿನಾಟಕ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವುದು, ಜಾನಪದ, ಸಾಹಿತ್ಯ ಅಕಾಡೆಮಿ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು. ಬಸವರಾಜ ಸಾನಕ್ಕನವರ, ಕರಬಸಪ್ಪ ಪೂಜಾರಿ, ಗೀತಾಬಾಯಿ ಲಮಾಣಿ, ರೇಣುಕಾ ಗೊರಮಟ್ಟಿ ಇತರರಿದ್ದರು.
ಭುವನೇಶ್ವರ ಪ್ರತಿಮೆ ಸ್ಥಾಪಿಸಿ: ಸುವರ್ಣ ವಿಧಾನಸೌಧ ಎದುರು ಭುವನೇಶ್ವರಿ ದೇವಿಯ 108 ಅಡಿ ಎತ್ತರ ಕಂಚಿನ ಪ್ರತಿಮೆ ಸ್ಥಾಪಿಸಲು ಒತ್ತಾಯಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಆಗ್ರಹಿಸಲಾಯಿತು. ಈಗಾಗಲೇ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿರುವುದು ಹೆಮ್ಮೆಯಿದೆ. ಅದರಂತೆ ಭುವನೇಶ್ವರಿ ಕಂಚಿನ ಪ್ರತಿಮೆ ನಿರ್ಮಿಸಬೇಕು. ಇದರಿಂದ ಶಕ್ತಿ ಸೌಧದ ಹಿರಿಮೆ ಹೆಚ್ಚಲಿದೆ ಎಂದು ಒತ್ತಾಯಿಸಿದರು. ಶ್ರೀನಿವಾಸ ತಾಳೂಕರ, ಹನಮಂತ ಬುಚಡಿ, ಆನಂದ ಲೋಕರಿ, ಮಲ್ಲಪ್ಪ ಸೊಂಟಕ್ಕಿ ಇತರರಿದ್ದರು.
ಪಾರಂಪರಿಕ ವೈದ್ಯ ವೃತ್ತಿಗೆ ಮಾನ್ಯತೆ ನೀಡಿ: ಪಾರಂಪರಿಕ ವೈದ್ಯ ಅಭಿವೃದ್ಧಿ ನಿಗಮ ರಚನೆ ಸೇರಿ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಹಾಗೂ ಸಂಘಗಳ ಒಕ್ಕೂಟದಿಂದ ಪ್ರತಿಭಟಿಸಲಾಯಿತು. ಪಾರಂಪರಿಕ ವೈದ್ಯ ವೃತ್ತಿಗೆ ಮಾನ್ಯತೆ ನೀಡಬೇಕು. ಹಿರಿಯ ಪಾರಂಪರಿಕ ವೈದ್ಯರನ್ನು ಗುರುತಿಸಿ ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಪ್ರಶಸ್ತಿ ನೀಡಿ ಪುರಸ್ಕರಿಸಬೇಕು. ಔಷಧೀಯ ಸಸ್ಯ ಬೆಳೆಸಲು ಹಾಗೂ ಬಳಸಲು ಪ್ರತಿ ಗ್ರಾಮ, ತಾಲೂಕು, ಜಿಲ್ಲೆಗಳಲ್ಲಿ ಧನ್ವಂತರಿ ವನ ಹಾಗೂ ವೈದ್ಯಭವನ ನಿರ್ಮಿಸಬೇಕು. ಹಿರಿಯ ಪಾರಂಪರಿಕ ವೈದ್ಯರಿಗೆ ಪ್ರತಿ ತಿಂಗಳು ಗೌರವಧನ ನೀಡಬೇಕು ಎಂದು ಒತ್ತಾಯಿಸಿದರು. ಶಿವಶಕ್ತಿ ಪೀಠ ಸುಕ್ಷೇತ್ರ ಇಳಕಲ್ಲ ಮಠದ ಬಸವಪ್ರಸಾದ ಸ್ವಾಮೀಜಿ, ಅಧ್ಯಕ್ಷ ಶರಣಪ್ಪ ಬಳ್ಳಾರಿ, ಕಾರ್ಯದರ್ಶಿ ವಿಜಯಕುಮಾರ ಇತರರಿದ್ದರು.
ಟೆಂಟ್ ನಂ.1ರಲ್ಲಿ ಒಬ್ಬಂಟಿ ಹೋರಾಟ
ಸುವರ್ಣ ಗಾರ್ಡನ್‌ದಲ್ಲಿ ಟೆಂಟ್ ನಂ.1 ರಲ್ಲಿ ಒಬ್ಬನೇ ಪ್ರತಿಭಟನೆ ನಡೆಸಿರುವುದು ಗಮನ ಸೆಳೆದಿದೆ. ಬೆಳಗಾವಿ ತಹಸೀಲ್ದಾರ್ ಕಚೇರಿಯಲ್ಲಿ ನಿವೃತ್ತಿ ಪಿಂಚಣಿ ಹಣ ಪಡೆಯಲು ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಪಿಂಚಣಿ ಹಣ ಪಡೆಯಲು 4ರಿಂದ 5 ಸಾವಿ ರೂ.ಹಣ ಕಮಿಷನ್ ನೀಡಬೇಕಿದೆ. ಈ ಬಗ್ಗೆ ಕ್ರಮ ವಹಿಸುವಂತೆ ವೃದ್ಧ ಕೆ.ವಿದ್ಯಾಸಾಗರ ಒಂಟಿಯಾಗಿ ಪ್ರತಿಭಟನೆ ನಡೆಸಿರುವುದು ವಿಶೇಷವಾಗಿತ್ತು.
ಕಾಂತರಾಜ್ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆ್ ಇಂಡಿಯಾ ವತಿಯಿಂದ ಪ್ರತಿಭಟಿಸಲಾಯಿತು. 2ಬಿ ಮೀಸಲಾತಿ ಮರು ಸ್ಥಾಪಿಸಿ, ಶೇ.8ಕ್ಕೆ ಏರಿಸಬೇಕು. ಒಳ ಮೀಸಲಾತಿಯಲ್ಲಿನ ಗೊಂದಲ ಪರಿಹರಿಸಬೇಕು. ಸದಾಶಿವ ಆಯೋಗದ ವರದಿ ಕೇಂದ್ರ ಸರ್ಕಾರಕ್ಕೆ ಶಿಾರಸು ಮಾಡಬೇಕು ಎಂದು ಒತ್ತಾಯಿಸಿದರು.
ನೇಕಾರರ ಆತ್ಮಹತ್ಯೆ ತಡೆಗೆ ಕ್ರಮವಹಿಸಿ
ನೇಕಾರರು ಬಾಕಿ ಉಳಿಸಿಕೊಂಡಿರುವ ಕಮರ್ಷಿಯಲ್ ವಿದ್ಯುತ್ ಬಿಲ್ ಪಾವತಿಗೆ ಒತ್ತಾಯಿಸದಂತೆ ಸರ್ಕಾರ ಸೂಚನೆ ನೀಡಬೇಕು ಎಂದು ರಾಷ್ಟ್ರೀಯ ನೇಕಾರರ ಸೇವಾ ಸಂಘದಿಂದ ಪ್ರತಿಭಟಿಸಲಾಯಿತು. ಮೇಲಿಂದ ಮೇಲೆ ವಿದ್ಯುತ್ ಸಂಪರ್ಕ ಕಡಿತಗೊಳಿಸಬಾರದು ಹಾಗೂ ನೇಕಾರರ ಆತ್ಮಹತ್ಯೆ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು, ನೇಕಾರರ ಬಾಕಿ ವಿದ್ಯುತ್ ಬಿಲ್ ಸರ್ಕಾರವೇ ಭರಿಸಬೇಕು, ಆತ್ಮಹತ್ಯೆ ಮಾಡಿಕೊಂಡ ನೇಕಾರರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕು, 2 ಲಕ್ಷ ರೂ. ವರೆಗಿನ ಸಾಲಮನ್ನಾ ಮಾಡಬೇಕು ಎಂದು ಮನವಿ ಮಾಡಿದರು. ಅರ್ಜುನ ಕುಂಬಾರ, ಲಕ್ಷ್ಮಣ ಕದಂಬ, ಅಕ್ಷಯ ಕುಂಬಾರ, ಆನಂದ ಜಗದಾಳೆ ಇತರರಿದ್ದರು.
ವೈದ್ಯರ ನೇಮಕವಾಗಲಿ
ನಗರದ ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ವೈದ್ಯರು ಹಾಗೂ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ವತಿಯಿಂದ ಪ್ರತಿಭಟಿಸಲಾಯಿತು. ದೇವಾಲಯಗಳು ಮತ್ತು ಶಾಲೆಗಳ ಸಮೀಪದ ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವ ವಿರುದ್ಧ ಕ್ರಮಕೈಗೊಳ್ಳುಬೇಕು, ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು. ವಿಜಯ ಪಾಟೀಲ, ರಿಜ್ವಾನ್ ಮಕಾನದಾರ್, ಜುನೇದ್ ಪಾಷಾ, ಶ್ರೀಕಾಂತ ಪಾಟೀಲ ಇದ್ದರು.
ಸೇವಾ ಭದ್ರತೆ ಕಲ್ಪಿಸಲಿ
ಗೌರವಧನ ಕಾರ್ಯಕರ್ತರ ಕನಿಷ್ಠ ವೇತನ ಪ್ರಸ್ತಾವವನ್ನು ಸಚಿವ ಸಂಪುಟದಲ್ಲಿ ಜಾರಿಗೊಳಿಸುವಂತೆ ಆಗ್ರಹಿಸಿ ನವಕರ್ನಾಟಕ ಎಂಆರ್‌ಡಬ್ಲುೃ, ವಿಆರ್‌ಡಬ್ಲುೃ, ಯುಆರ್‌ಡಬ್ಲುೃ ಅಂಗವಿಕಲರಿಗೆ ಗೌರವಧನ ಕಾರ್ಯಕರ್ತರ ಸಂಘದಿಂದ ಸೋಮವಾರ ಪ್ರತಿಭಟಿಸಲಾಯಿತು. ರಾಜ್ಯದಲ್ಲಿ 6,800 ವಿವಿಧೋದ್ದೇಶ, ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರು ಗೌರವಧನ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 18 ವರ್ಷಗಳಿಂದ ದುಡಿಯುತ್ತಿರುವ ನಮಗೆ ಸರಿಯಾದ ವೇತನ ಸಿಗುತ್ತಿಲ್ಲ. ಈಗಾಗಲೇ ಸರ್ಕಾರ ಭದ್ರತೆಯಡಿ ಸಿಗಬೇಕಾದ ಎಲ್ಲ ಸೌಲಭ್ಯ ನೀಡಿದೆ. ಕನಿಷ್ಠ ವೇತನ ಕಾಯ್ದೆಗೆ ಒಳಪಡಿಸಿ ಸೇವಾ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು. ಕೀರಗೌಡ ಪಾಟೀಲ, ಅಂಭಾಜಿ ಮೇಟಿ, ಚಂದ್ರಯ್ಯ ಕೆ.ಎಸ್. ಇದ್ದರು.
ಎಸ್ಸಿಎಸ್ಪಿ, ಟಿಎಸ್ಪಿ ಅನುಷ್ಠಾನ ಸಮಿತಿ ಜಾರಿಗೊಳಿಸಿ
ಎಸ್ಸಿಎಸ್ಪಿ,ಟಿಎಸ್ಪಿ ಅನುಷ್ಠಾನ ಸಮಿತಿ ತಕ್ಷಣ ಜಾರಿಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಭೀಮ್ ಆರ್ಮಿ ಸಂಘಟನೆಯಿಂದ ಪ್ರತಿಭಟಿಸಲಾಯಿತು. ಎಸ್ಸಿಎಸ್ಪಿ, ಟಿಎಸ್ಪಿ ನಿಧಿಗಳ ಬಳಕೆ ಕಡ್ಡಾಯಗೊಳಿಸಿ, ಅನುದಾನ ಗ್ಯಾರಂಟಿ ಯೋಜನೆಗೆ ವರ್ಗಾಯಿಸುವುದನ್ನು ನಿಲ್ಲಿಸಬೇಕು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 50 ರೈತರಿಗೆ 50 ಲಕ್ಷ ರೂ. ವೆಚ್ಚದಲ್ಲಿ ಭೂಮಿ ಖರೀದಿಸಿ ಹಸ್ತಾಂತರಿಸುವ ಯೋಜನೆ ತಕ್ಷಣ ಜಾರಿಗೊಳಿಸಬೇಕು. ಸಮೃದ್ಧಿ ಯೋಜನೆಯ ಅನುದಾನ 10 ಲಕ್ಷ ರೂ.ದಿಂದ 20 ಲಕ್ಷ ರೂ.ಗೆ ಹೆಚ್ಚಿಸಿ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಠ 100 ಲಾನುಭವಿಗಳಿಗೆ ತಲುಪಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ರಾಜಗೋಪಾ ಲ, ಮನೋಬರ್ ಹುಸೇನ್, ಮುತ್ತೆಪ್ಪ ಯಲಿಗೌಡ, ಯಾಸೀನ್ ಶೇಖ್, ಸಂದೀಪ ಚಲವಾದಿ ಇತರರಿದ್ದರು.
ಸ್ವಾತಂತ್ರ್ಯ ಯೋಧರ ಕುಟುಂಬಸ್ಥರಿಗೆ ಸೌಲಭ್ಯ ನೀಡಿ
ಸ್ವಾತಂತ್ರ್ಯ ಯೋಧರ ಉತ್ತರಾಧಿಕಾರಿಗೆ ಸರ್ಕಾರದ ಗುರುತಿನ ಪತ್ರ ಒದಗಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಹಳೇ ಧಾರವಾಡ ಜಿಲ್ಲಾ ಸ್ವಾತಂತ್ರ್ಯಯೋಧರ ಉತ್ತರಾಧಿಕಾರಿಗಳ ಕ್ಷೇಮಾಭಿವದ್ಧಿ ಟ್ರಸ್ಟ್ ವತಿಯಿಂದ ಪ್ರತಿಭಟಿಸಲಾಯಿತು. ಸರ್ಕಾರಿ ಉದ್ಯೋಗ, ಯೋಜನೆಗಳಲ್ಲಿ ಮೀಸಲಾತಿ, ಕೃಷಿಕರಿಗೆ ನೀರಾವರಿ, ಕೃಷಿ ಅಭಿವೃದ್ಧಿಗೆ ಅನುದಾನ, ಧನಸಹಾಯ, ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಬಸ್ ಪಾಸ್ ಒದಗಿಸಬೇಕು ಎಂದು ಒತ್ತಾಯಿಸಿದರು. ಮೃತ್ಯುಂಜಯ ಕುಲಕರ್ಣಿ, ಮಂಜುನಾಥ ಗರಪಟ್ಟಿ, ಡಾ.ಪ್ರಭುಸ್ವಾಮಿ ಹಾಲೇವಾಡಿಮಠ, ಈರಪ್ಪ ಪರಕಾಳಿ ಇತರರಿದ್ದರು.