ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ಗುರುವಾರ ಕಾರ್ತಿಕ.ಎಂ,. ಆರುಷಿ ಶರ್ಮಾ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು. 
ಬೆಳಗಾವಿ

ಮಹಾನಗರ ಪಾಲಿಕೆ ಕಚೇರಿ ಅಲೆದಾಟಕ್ಕೆ ಬ್ರೇಕ್!

ಬೆಳಗಾವಿ:ಜನನಮರಣ ಪ್ರಮಾಣ ಪತ್ರಕ್ಕಾಗಿ ಮಹಾನಗರ ಪಾಲಿಕೆ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಿ, ಮತ್ತೆ ಪ್ರಮಾಣ ಪತ್ರ ಪಡೆಯಲು ಕಚೇರಿಗೆ ಭೇಟಿ ನೀಡಬೇಕಾದ ಸಾರ್ವಜನಿಕರ ಸಂಕಷ್ಟಕ್ಕೆ ಇದೀಗ ಬ್ರೇಕ ಬೀಳಲಿದೆ. ಅರ್ಜಿ ಸಲ್ಲಿಸಿದ ಬಳಿಕ ಪ್ರಮಾಣ ಪತ್ರವನ್ನು ಅಂಚೆ ಮೂಲಕ ನೇರವಾಗಿ ಮನೆ ಬಾಗಿಲಿಗೆ ತಲುಪಿಸುವ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ.
ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ಅಂಚೆ ಇಲಾಖೆಯ ಬೆಳಗಾವಿ ವಿಭಾಗದ ಹಿರಿಯ ಅಧೀಕ್ಷಕಿ ಆರುಷಿ ಶರ್ಮಾ ಹಾಗೂ ಪಾಲಿಕೆ ಆಯುಕ್ತ ಕಾರ್ತಿಕ್.ಎಂ. ಪರಸ್ಪರ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಉಭಯ ಇಲಾಖೆಗಳ ನಡುವೆ ಒಡಂಬಡಿಕೆ ಮಾಡಿಕೊಂಡರು.
ಬಳಿಕ ಆಯುಕ್ತ ಕಾರ್ತಿಕ್.ಎಂ., ಮಾತನಾಡಿ,ಜನನ ಅಥವಾ ಮರಣ ಪ್ರಮಾಣ ಪತ್ರ ಪಡೆಯಲು ಇನ್ನು ಮುಂದೆ ಸಾರ್ವಜನಿಕರು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿಯೇ ಪ್ರಮಾಣ ಪತ್ರವನ್ನು ಅಂಚೆ ಮೂಲಕ ಪಡೆಯುವ ಆಯ್ಕೆಯನ್ನು ಮಾಡಿಕೊಳ್ಳಬಹುದಾಗಿದೆ. ಅರ್ಜಿಯೊಂದಿಗೆ ತಮ್ಮ ಸಂಪೂರ್ಣ ಅಂಚೆ ವಿಳಾಸ ಹಾಗೂ ಒಪ್ಪಿಗೆ ಪತ್ರವನ್ನು ಸಲ್ಲಿಸಿದರೆ, ಪಾಲಿಕೆಯ ಜನನಮರಣ ಪ್ರಮಾಣ ಪತ್ರ ವಿತರಣಾ ವಿಭಾಗವು ಪ್ರಮಾಣ ಪತ್ರವನ್ನು ಅಂಚೆ ಇಲಾಖೆಯ ಮೂಲಕ ನೇರವಾಗಿ ಅರ್ಜಿದಾರರ ಮನೆಗೆ ಕಳುಹಿಸಲಿದೆ.ಅಂಚೆ ಮೂಲಕ ಪ್ರಮಾಣ ಪತ್ರ ತಲುಪಿದ ಸಂದರ್ಭದಲ್ಲಿ ನಿಗದಿತ ಅಂಚೆ ಶುಲ್ಕ ಪಾವತಿಸಿ ಪ್ರಮಾಣ ಪತ್ರವನ್ನು ಮನೆ ಬಾಗಿಲಲ್ಲೇ ಸ್ವೀಕರಿಸಬಹುದಾಗಿದೆ. ಜನನ ಹಾಗೂ ಮರಣ ಪ್ರಮಾಣ ಪತ್ರ ಪಡೆಯುವ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶದಿಂದ ಅಂಚೆ ಇಲಾಖೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅಧೀಕ್ಷಕಿ ಆರುಷಿ ಶರ್ಮಾ ಮಾತನಾಡಿ, ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಂಚೆ ಮೂಲಕ ಪ್ರಮಾಣ ಪತ್ರ ಪಡೆಯಲು ವಿಳಾಸ ಸಹಿತ ಒಪ್ಪಿಗೆ ನೀಡಿದಲ್ಲಿ, ಪ್ರಮಾಣ ಪತ್ರವನ್ನು ಅಂಚೆ ಮೂಲಕ ಮನೆಗೆ ಕಳುಹಿಸಲಾಗುವುದು. ಇದರಿಂದ ಸಾರ್ವಜನಿಕರ ಸಮಯ ಮತ್ತು ವೆಚ್ಚ ಎರಡೂ ಉಳಿತಾಯವಾಗಲಿದೆ ಎಂದರು.
ನೋಂದಣಾಧಿಕಾರಿ ಅಶೋಕಕುಮಾರ ಸಜ್ಜನ, ಅಂಚೆ ಇಲಾಖೆ ಅಧಿಕಾರಿಗಳಾದ ಮಾರುತಿ ದೊಡಮನಿ, ಅನಂತಶಯನ ಇತರರಿದ್ದರು.
...................