ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಟಿ.ಶ್ಯಾಮ್ ಭಟ್, ಎಸ್.ಕೆ.ವಂಟಗೋಡಿ ಭೇಟಿ ನೀಡಿದರು. ಡಾ.ಅಶೊಕುಮಾರ ಶೆಟ್ಟಿ, ಡಾ.ಈರಣ್ಣ ಪಲ್ಲೇದ ಇತರರಿದ್ದರು. 
ಬೆಳಗಾವಿ

ಮಾಹಿತಿ ಕೊರತೆಯಿಂದ 3,025 ಪ್ರಕರಣ ಬಾಕಿ

ಬೆಳಗಾವಿ: ಜಿಲ್ಲಾ ಮಟ್ಟದ ವಿವಿಧ ಇಲಾಖೆ ಮಾಹಿತಿ ಕಳುಹಿಸಲು ವಿಳಂಬ ಮಾಡುತ್ತಿರುವ ಕಾರಣ 3,025 ಪ್ರಕರಣ ಇತ್ಯರ್ಥವಾಗದೆ ಬಾಕಿ ಉಳಿದಿವೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಟಿ.ಶ್ಯಾಮ್ ಭಟ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವರ್ಷ ಆಯೋಗದಲ್ಲಿ ದಾಖಲಾಗಿದ್ದ 8 ಸಾವಿರ ಪ್ರಕರಣ ಹಂತ- ಹಂತವಾಗಿ ಇತ್ಯರ್ಥಪಡಿಸಲಾಗುತ್ತಿದೆ. ಇಲಾಖೆಗಳಿಂದ ಮಾಹಿತಿ ಲಭ್ಯವಾಗದಿರುವ ಕಾರಣ ಒಂದು ಪ್ರಕರಣ ಇತ್ಯರ್ಥಪಡಿಸಲು ಮೂರು ತಿಂಗಳು ಸಮಯ ಬೇಕು. ಪ್ರತಿ ತಿಂಗಳು ದಾಖಲಾಗುತ್ತಿರುವ ದೂರುಗಳ ಪೈಕಿ ಕೆಲವು ಗಂಭೀರವಾಗಿರುತ್ತವೆ. ಕೆಲವು ವೈಯಕ್ತಿಕ, ಸುಳ್ಳು ಮಾಹಿತಿಗಳಿಂದ ಕೂಡಿರುತ್ತವೆ. ಪೊಲೀಸ್ ಮತ್ತು ಕಂದಾಯ ಇಲಾಖೆಯಿಂದ ಅಧಿಕ ಸಂಖ್ಯೆಯಲ್ಲಿ ದೂರು ಬರುತ್ತಿವೆ ಎಂದರು.
ರಾಜ್ಯಾದ್ಯಂತ ಮಾನವ ಹಕ್ಕು ಆಯೋಗದ ಹೆಸರಿನಲ್ಲಿ ಕೆಲ ನಕಲಿ ಸಂಸ್ಥೆಗಳು ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳನ್ನು ಹೆದರಿಸುತ್ತಿರುವ ದೂರು ಬಂದಿವೆ. ಇವುಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಕಠಿಣ ಕ್ರಮ ಕೈಗೊಳ್ಳಲು ಗೃಹ ಮತ್ತು ಸಹಕಾರ ಇಲಾಖೆಗೆ ತಿಳಿಸಲಾಗಿದೆ. ಆಯೋಗದ ಹೆಸರಿನಲ್ಲಿ ದೌರ್ಜನ್ಯ ನಡೆಸುವವರ ವಿರುದ್ಧ ನಾಗರಿಕರು ದೂರು ನೀಡಬೇಕು. ಪ್ರತಿ ತಿಂಗಳು ಜಿಲ್ಲಾ ಪ್ರವಾಸ ಕೈಗೊಂಡು ಆಸ್ಪತ್ರೆ, ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ಹೇಳಿದರು.
ಆಯೋಗದ ಸದಸ್ಯ ಎಸ್.ಕೆ.ವಂಟಗೋಡಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ನಗರ ಪೊಲೀಸ್ ಆಯುಕ್ತ ಭೂಷಣ ಭೊರಸೆ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಇತರರಿದ್ದರು.

ರೋಗಿಗಳ ಬಗ್ಗೆ ನಿರ್ಲಕ್ಷ್ಯ ಸಲ್ಲದು

ಬೆಳಗಾವಿ ಜಿಲ್ಲಾಸ್ಪತ್ರೆಗೆ ಹೆಚ್ಚುವರಿ ಎಂಆರ್‌ಐ ಸ್ಕಾೃನಿಂಗ್ ಯಂತ್ರ ಸೇರಿ ವೈದ್ಯಕೀಯ ಸಲಕರಣೆ ಅಳವಡಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು. ಬಡ ರೋಗಿಗಳ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯಮಾಡಿದರೆ ಸಹಿಸುವುದಿಲ.್ಲ ಸಮಯಕ್ಕೆ ಸರಿಯಾಗಿ ಚಿಕಿತ್ಸೆ, ವೈದ್ಯರು ಸಿಗುತ್ತಿಲ್ಲ ಎಂಬ ದೂರು ಬರುತ್ತಿವೆ. ರೋಗಿಗಳ ದಾಖಲಾತಿಗಾಗಿ ಹೆಚ್ಚಿನ ಕೌಂಟರ್ ಸ್ಥಾಪಿಸಬೇಕು. ಜನನ ಪ್ರಮಾಣಪತ್ರ ವಿತರಣೆಯಲ್ಲಿ ವಿಳಂಬ ಮಾಡಬಾರದು. ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಪೂರೈಸಬೇಕು ಎಂದು ಅಧಿಕಾರಿಗಳಿಗೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ಸೂಚನೆ ನೀಡಿದರು.