ಅಕ್ಕಿ ವಶ  
ಬೆಳಗಾವಿ

2 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ವಶ

ಬೆಳಗಾವಿ: ಅನ್ನಭಾಗ್ಯ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿ ಕಾರಿನಲ್ಲಿ ಖಾನಾಪುರದಿಂದ ಬೆಳಗಾವಿಯತ್ತ ಸಾಗಿಸುತ್ತಿದ್ದಾಗ ದಾಳಿ ಮಾಡಿರುವ ಖಾನಾಪುರ ಪೊಲೀಸರು ಓರ್ವನನ್ನು ಬಂಧಿಸಿ 8,120 ರೂ. ಮೌಲ್ಯದ 232 ಕೆಜಿ ಅಕ್ಕಿ ವಶಪಡಿಸಿಕೊಂಡಿದ್ದಾರೆ.
ಖಾನಾಪುರ ಪಟ್ಟಣದ ಗಾಂಧಿ ನಗರ 1ನೇ ಕ್ರಾಸ್ ನಿವಾಸಿ ಅಜಾಜ್ ಶಿರಸಂಗಿ (25) ಬಂಧಿತ. ಈತ ಅಕ್ಕಿ ಸಂಗ್ರಹಿಸಿ ಬೇರೆಡೆ ಸಾಗಿಸುವ ದಂಧೆ ಮಾಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ದಾಳಿ ಮಾಡಿ ಬಂಧಿಸಿದ್ದಾರೆ. ಈತನ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಇದರಲ್ಲಿ ಶಾಮೀಲಾಗಿರುವ ಇತರರನ್ನೂ ಬಂಧಿಸುವುದಾಗಿ ಖಾನಾಪುರ ಪೊಲೀಸರು ತಿಳಿಸಿದ್ದಾರೆ.
ಕಳ್ಳನ ಬಳಿ ಆಭರಣ ಪತ್ತೆ: ಗೋಕಾಕ ನಗರದ ಅಂಗಡಿಯಲ್ಲಿ ಅಡವಿಟ್ಟ ಚಿನ್ನ ಬಿಡಿಸಿಕೊಂಡು ಹೊರಟಿದ್ದಾಗ ಕಳೆದುಹೋದ ಬಗ್ಗೆ ರಾಯಬಾಗ ತಾಲೂಕಿನ ಮಂಟೂರ ಗ್ರಾಮದ ರೇವಪ್ಪ ಹಳ್ಳೂರ ದೂರು ನೀಡಿದ್ದರು. ತನಿಖೆ ಕೈಗೊಂಡಿದ್ದ ಗೋಕಾಕ ಪೊಲೀಸರು, ಮೂಡಲಗಿ ತಾಲೂಕಿನ ಮನ್ನಾಪುರದ ವೆಂಕಟರಾವ ದೇಸಾಯಿಯನ್ನು ಬಂಧಿಸಿ 70 ಸಾವಿರ ರೂ. ಮೌಲ್ಯದ 14.5 ಗ್ರಾಂ ನೆಕ್ಲೆಸ್ ಹಾಗೂ 50 ಸಾವಿರ ರೂ. ಮೌಲ್ಯದ 8.7 ಗ್ರಾಂ ಚಿನ್ನದ ಸರ ವಶಪಡಿಸಿಕೊಂಡಿದ್ದಾರೆ.
ಗಾಂಜಾ ಸೇವನೆ: ಮುನವಳ್ಳಿಯ ಶಿಂಧೋಗಿ ಕ್ರಾಸ್ ಮತ್ತು ಕುಮಾರೇಶ್ವರ ಗುಡಿ ಬಳಿ ದಾಳಿ ಮಾಡಿರುವ ಸವದತ್ತಿ ಪೊಲೀಸರು ಗಾಂಜಾ ಸೇವನೆಗೆ ಯತ್ನಿಸಿದ್ದ ಗಾಂಧಿ ನಗರದ ಅಬ್ದುಲ್‌ರೆಹಮಾನ್ ಬಾಬುಸಾಬ ಮಿರ್ಜಿ(23) ವಶಕ್ಕೆ ಪಡೆದು 1,000ರೂ. ಮೌಲ್ಯದ 9 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಗಾಂಜಾ ಪೂರೈಸಿದ್ದ ಧಾರವಾಡ ತಾಲೂಕಿನ ಅಮ್ಮಿನಬಾವಿಯ ಸಾಹಿಲ್ ಅಲ್ಲಾಭಕ್ಷ ಅತ್ತಾರನನ್ನು ಬಂಧಿಸಲಾಗಿದೆ.
ಬೈಲಹೊಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಒಸಿ ಆಟ ಆಡಿಸುತ್ತಿದ್ದ ಜಿನ್ನಪ್ಪ ಭಾಂವಿ(53) ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಬೈಲಹೊಂಗಲ ಪೊಲೀಸರು, ಒಸಿ ಅಂಕಿ ಬರೆದ ಪೇಪರ್, 720 ರೂ. ನಗದು ವಶಪಡಿಸಿಕೊಂಡಿದ್ದಾರೆ.