ಜಿಲ್ಲೆ

ಬೆಳಗಾವಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರ ; ದ್ವಿತೀಯ ಭಾಷೆ ಪರೀಕ್ಷೆಗೆ 786 ವಿದ್ಯಾರ್ಥಿಗಳು ಗೈರು

Belagavi

ಬೆಳಗಾವಿ : ಚಿಕ್ಕೋಡಿ ಮತ್ತು ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 271 ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸುಗಮವಾಗಿ ಜರುಗಿತು. ದ್ವಿತೀಯ ಭಾಷೆ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ 76,075 ವಿದ್ಯಾರ್ಥಿಗಳ ಪೈಕಿ ಒಟ್ಟು 786 ಪರೀಕ್ಷಾರ್ಥಿಗಳು ಗೈರಾದರು.
ಚಿಕ್ಕೋಡಿ ಜಿಲ್ಲೆಯಲ್ಲಿ 43,745 ಹಾಗೂ ಬೆಳಗಾವಿ ಜಿಲ್ಲೆಯಲ್ಲಿ 32,330 ಪರೀಕ್ಷಾರ್ಥಿಗಳು ಹಾಜರಾಗಬೇಕಿತ್ತು. ಪರೀಕ್ಷೆಗೆ ಹಾಜರಾದವರಲ್ಲಿ 129 ಪುನರಾವರ್ತಿತ ವಿದ್ಯಾರ್ಥಿಗಳು, 579 ಖಾಸಗಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 75,289 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಇನ್ನು 40 ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ 359 ಖಾಸಗಿ ವಿದ್ಯಾರ್ಥಿಗಳು ಸೇರಿದಂತೆ ಚಿಕ್ಕೋಡಿಯ 503 ಹಾಗೂ ಬೆಳಗಾವಿಯ 283 ವಿದ್ಯಾರ್ಥಿಗಳು ಗೈರಾಗಿ ಪರೀಕ್ಷೆಯಿಂದ ದೂರು ಉಳಿದರು. ನಕಲು ತಡೆಗೆ ಪರೀಕ್ಷಾ ಕೇಂದ್ರಗಳ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರತಿಯೊಂದು ಕೇಂದ್ರದಲ್ಲಿ ಎರಡು ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಈ ಎಲ್ಲ ಮೂಲಸೌಲಭ್ಯಗಳೊಂದಿಗೆ ಬೆಳಗಾವಿಯಲ್ಲಿ 120 ಹಾಗೂ ಚಿಕ್ಕೋಡಿ ಜಿಲ್ಲೆಯಲ್ಲಿ 151 ಸೇರಿ ಒಟ್ಟು 271 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಜರುಗಿತು. ಎರಡೂ ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯಲ್ಲಿ ಯಾವ ವಿದ್ಯಾರ್ಥಿಗಳು ಡಿಬಾರ್ ಆದ ಬಗ್ಗೆ ವರದಿಯಾಗಿಲ್ಲ.ಯಾವುದೇ ಅಹಿತಕರ ಘಟನೆಗಳಾಗದಂತೆ ಪರೀಕ್ಷೆ ಶಾಂತಿಯುತವಾಗಿ ನಡೆಯಿತು.

ಪೊಲೀಸ್ ಭದ್ರತೆಯಲ್ಲಿ ಪರೀಕ್ಷೆ :
ಗಣಿತ ಪರೀಕ್ಷೆಯಲ್ಲಿ ನಕಲು ನಡೆದಿರುವುದು ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದ್ದ ಹಿನ್ನೆಲೆಯಲ್ಲಿ ಗುರುವಾರ ಶಿಕ್ಷಣ ಇಲಾಖೆ ಬಿಗಿ ಪೊಲೀಸ್ ಭದ್ರತೆಯಲ್ಲಿ ದ್ವಿತೀಯ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಿತು.


ಏ.3ರಂದು ಶಿಕ್ಷಣ ಇಲಾಖೆಯ ಧಾರವಾಡ ವಲಯದ ಆಯುಕ್ತೆ ಜಯಶ್ರೀ ಶಿಂತ್ರಿ ಅವರ ಪರಿಶೀಲನೆ ಸಂದರ್ಭದಲ್ಲಿ ನಕಲು ನಡೆಯುತ್ತಿದ್ದ ಬೆಳಗಾವಿಯ ಸರ್ಧಾರ ಪ್ರೌಢ ಶಾಲೆ ಹಾಗೂ ಹಿರೇಬಾಗೇವಾಡಿಯ ಕರ್ನಾಟಕ ಪ್ರೌಢ ಶಾಲೆಯಲ್ಲಿ ಗುರುವಾರ ವಿಶೇಷ ನಿಗಾ ಇರಿಸಲಾಗಿತ್ತು. ಅಲ್ಲದೇ, ಹಿರೇಬಾಗೇವಾಡಿಯ ಪರೀಕ್ಷಾ ಕೇಂದ್ರಕ್ಕೆ ದೈಹಿಕ ಶಿಕ್ಷಣದ ಜಿಲ್ಲಾ ಅಧಿಕಾರಿ ಡಿ.ಎಸ್.ಡಿಗ್ರಜ ಅವರನ್ನು ನಿಯೋಜಿಸಲಾಗಿತ್ತು. ಡಿಗ್ರಜ ಅವರು ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಯಾವುದೇ ಗೊಂದಲಗಳಿಗೆ ಅವಕಾಶ ಕೊಡದಂತೆ ಪರೀಕ್ಷೆ ನಡೆಸುವಲ್ಲಿ ಶ್ರಮಿಸಿದರು.
ಜಿಲ್ಲೆಯಲ್ಲಿ ಡಿಡಿಪಿಐ, ಡಯಟ್ ಪ್ರಾಚಾರ್ಯ, ಉಪ ಯೋಜನಾ ಸಮನ್ವಯಾಧಿಕಾರಿ, ಶಿಕ್ಷಣಾಧಿಕಾರಿಗಳು, ವಿಷಯ ಪರಿವೀಕ್ಷಕರನ್ನು ಒಳಗೊಂಡಂತೆ ತಲಾ ಮೂರು ಸದಸ್ಯರಿರುವ 3 ಜಾಗೃತ ದಳಗಳು ಪರೀಕ್ಷಾ ಕೇಂದ್ರಗಳಿಗೆ ನಿರಂತರ ಭೇಟಿ ನೀಡಿ ಪರಿಶೀಲನೆ ನಡೆಸಿದವು. ಜಿಲ್ಲಾಡಳಿತ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸುಗಮ ಮತ್ತು ಸುರಕ್ಷಿತ ಪರೀಕ್ಷೆಗೆ ಹೆಚ್ಚಿನ ಒತ್ತು ನೀಡಿತ್ತು. ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಆರಂಭವಾಗುವುದಕ್ಕೂ ಮುನ್ನ ಧ್ವನಿ ವರ್ಧಕದ ಮೂಲಕ ವಿದ್ಯಾರ್ಥಿಗಳಿಗೆ ಅಗತ್ಯವಾದ ಮಾಹಿತಿ ಮತ್ತು ಸೂಚನೆ ನೀಡಲಾಯಿತು.