ಜಿಲ್ಲೆ

ಕ್ಷೇತ್ರದ ಅಭಿವೃದ್ಧಿ ಗೆ ಕೈ ಜೋಡಿಸಿ- ಹೆಬ್ಬಾಳ್ಕರ್ ‌ಮನವಿ

Belagavi

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಜನರಿಗೆ ನೀಡಿದ್ದ ಭರವಸೆಗಳಲ್ಲಿ ಶೇ.98ರಷ್ಟು ಈಡೇರಿಸಿದ್ದೇನೆ. ವಿರೋಧ ಪಕ್ಷದ ಶಾಸಕಿಯಾಗಿದ್ದರಿಂದ ಎರಡು ಭರವಸೆಗಳು ಬಾಕಿ ಉಳಿದಿದ್ದು, ಈ ಬಾರಿ ಕಾಂಗ್ರೆಸ್ ಸರ್ಕಾರ ಅವುಗಳನ್ನು ಈಡೇರಿಸಲು ಮೊದಲ ಆದ್ಯತೆ ನೀಡುತ್ತೇನೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದರು.
ಗ್ರಾಮೀಣ ಕ್ಷೇತ್ರದ ಕಂಗ್ರಾಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಗುರುವಾರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಕ್ಷೇತ್ರದ ಜನರಿಗೆ  ಅಭಿವೃದ್ಧಿ ಭರವಸೆಗಳನ್ನು ನೀಡಿದ್ದೆ ಅವುಗಳನ್ನು ಈಡೇರಿಸುವ ಕೆಲಸ ಮಾಡಿದ್ದೇನೆ. ವಿರೋಧ ಪಕ್ಷದಲ್ಲಿದ್ದರು ಕ್ಷೇತ್ರದ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದರು.
ಬೆಳಗಾವಿ ಗ್ರಾಮೀಣ ಕ್ಷೇತ್ರ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ ಹಿಂದುಳಿದಿದ್ದರಿಂದ ಕಳೆದ ಬಾರಿ ಮೂಲಸೌಕರ್ಯಗಳಿಗೆ ಮೊದಲ ಆದ್ಯತೆ ನೀಡಿದ್ದೇನೆ. ರಸ್ತೆ, ಚರಂಡಿ, ಕುಡಿಯುವ ನೀರು, ಶಾಲೆ, ದೇವಸ್ಥಾನ, ಸಮುದಾಯ ಭವನಗಳ ಬೇಡಿಕೆಗಳನ್ನು ಈಡೇರಿಸಿದ್ದೇನೆ. ಇದರ ಜತೆಗೆ ಕಾಲೇಜು ಮತ್ತು ಆಸ್ಪತ್ರೆ ಕಟ್ಟಿಸುವ ಯೋಜನೆಯನ್ನೂ ನಾನು ಹಾಕಿಕೊಂಡಿದ್ದೆ. ಆದರೆ ನಮ್ಮ ಸರ್ಕಾರವಿಲ್ಲದ್ದರಿಂದ ಅದು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಅವುಗಳನ್ನು ಈಡೇರಿಸುತ್ತೇನೆ ಎಂದರು.
ಜಲಸಂಪನ್ಮೂಲ ಇಲಾಖೆಯಿಂದ 695.81 ಕೇಟಿ ರೂ., ಸಣ್ಣ ನೀರಾವರಿ ಇಲಾಖೆಯಿಂದ 3,092 ಲಕ್ಷ ರೂ., ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ 5142.74 ಲಕ್ಷ ರೂ., ಲೋಕೋಪಯೋಗಿ ಇಲಾಖೆಯಿಂದ 1694.35 ಲಕ್ಷರೂ., ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 100 ಲಕ್ಷ ರೂ., ಕನ್ನಡ ಮತ್ತು ಸಂಸ್ಕೃತಿ ಇಲಾಖಿಯಿಂದ 50 ಲಕ್ಷ ರೂ., ಪ್ರವಾಸೋದ್ಯಮ ಇಲಾಖೆಯಿಂದ 300 ಲಕ್ಷ ರೂ., ಹಿಂದುಳಿದ ವರ್ಗಗಳ ಇಲಾಖಿಯಂದ 100 ಲಕ್ಷ ರೂ., ಶಾಸಕರ ನಿಧಿಯಿಂದ 792 ಲಕ್ಷ ರೂ., ಗ್ರಾಮೀಣಾಭಿವೃದ್ಧಿ ನಿಗಮದಿಂದ 800 ಲಕ್ಷ ರೂ., ಮುಜರಾಯಿ ಇಲಾಖೆಯಿಂದ 960 ಲಕ್ಷ ರೂ., ರಸ್ತೆ, ದೇವಸ್ಥಾನ, ಬ್ರಿಡ್ಜ್ ಕಂ ಬಾಂದಾರ, ಕೆರೆಗಳ ಅಭಿವೃದ್ಧಿ, ಸರಕಾರಿ ಶಾಲೆಗಳ ಕೊಠಡಿ ನಿರ್ಮಾಣ - ದುರಸ್ತಿ, ಶಾಲಾ ಮೈದಾನಗಳ ಅಭಿವೃದ್ಧಿಗೆ ವಿಶೇಷ ಅನುದಾನ ತಂದಿದ್ದೇನೆ ಎಂದು ವಿವರಿಸಿದರು