ಬೆಳಗಾವಿ: ಬೆಳಗಾವಿ ಹಾಗೂ ಖಾನಾಪುರ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ಬೆಳಗಾವಿ (ಉತ್ತರ) ತಾಲೂಕು ಘಟಕದ ಪದಾಧಿಕಾರಿಗಳು ಶುಕ್ರವಾರ ಒಣಗಿದ ಬೆಳೆ ಹಿಡಿದುಕೊಂಡು ಬಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈಗಾಗಲೇ ಸರ್ಕಾರ ಹಲವು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಿವೆ. ಆದರೆ, ಬೆಳಗಾವಿ ತಾಲೂಕು, ಖಾನಾಪುರ ತಾಲೂಕಿನ ಹೆಸರುಗಳನ್ನು ಮಾತ್ರ ಘೋಷಿಸಿಲ್ಲ. ಈ ಎರಡೂ ತಾಲೂಕಿನಲ್ಲಿ ಬಿತ್ತಿದ ಭತ್ತ, ಬಟಾಟೆ, ಗೋವಿನಜೋಳ, ಕ್ಯಾಬಿಜ್, ಗೆಣಸು ಸೇರಿ ಇತರೆ ಬೆಳೆಗಳು ಮಳೆ ಇಲ್ಲದೇ ಒಣಗಿಹೋಗಿವೆ. ಸಾವಿರಾರು ಖರ್ಚು ಮಾಡಿ ಬಿತ್ತನೆ ಮಾಡಿದ ರೈತರ ಬದುಕು ಚಿಂತಾಜನಕವಾಗಿದೆ. ಎರಡೂ ತಾಲೂಕುಗಳನ್ನು ಒಂದು ವಾರದೊಳಗೆ ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಬೇಕು. ಇಲ್ಲದಿದ್ದರೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಬಸವರಾಜ ಪಾಟೀಲ, ಕಲಗೌಡ ಪಾಟೀಲ, ವೈಜು ಲೂಮ್ಯಾಚೆ, ಪರ್ವತಗೌಡ ಪಾಟೀಲ, ಬಸವರಾಜ ಡೊಂಗರಗಾವಿ, ಪ್ರಕಾಶ ಲೋಹಾರ, ದುಂಡಪ್ಪ ಹೊಸಪೇಟಿ ಇತರರಿದ್ದರು.