ಬೆಳಗಾವಿ: ಇಲ್ಲಿನ ಐಸಿಎಂಆರ್– ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾ ವಿಧಾನ ಸಂಸ್ಥೆಯಲ್ಲಿ ಸೆಪ್ಟೆಂಬರ್ 14, 15ರಂದು ವಿವಿಧ ವೈದ್ಯಕೀಯ ಪ್ರಯೋಗಗಳ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಸುಬರ್ನಾ ರಾಯ್ ಹೇಳಿದರು.
ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘
1995ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ ಆಧುನಿಕ ವೈದ್ಯಕೀಯ ಪದ್ಧತಿ ಮತ್ತು ಪಾರಂಪರಿಕ ಚಿಕಿತ್ಸಾ ಪದ್ಧತಿ ಕುರಿತು ಸಂಶೋಧನೆ ಕೈಗೊಳ್ಳುತ್ತಿದೆ. ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುತ್ತಿದೆ. ನಮ್ಮಲ್ಲಿ ಕೈಗೊಳ್ಳುವ ಔಷಧೀಯ ಪ್ರಯೋಗಗಳಿಗೆ ಸಂಬಂಧಿಸಿ ವೈದ್ಯರಿಗೆ ತಂತ್ರಜ್ಞರಿಗೆ ಮಾಹಿತಿ ವಿನಿಯಮ ಮಾಡಿಕೊಳ್ಳಬೇಕಾಗಿದೆ. ಈ ಕಾರಣಕ್ಕೆ ಎರಡು ದಿನಗಳ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ಚೆನ್ನೈನ ಐಸಿಎಂಆರ್– ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ರಿಸರ್ಚ್ ಇನ್ ಟ್ಯೂಬರ್‌ಕ್ಯುಲೊಸಿಸ್‌ನ (ಕ್ಷಯ) ನಿರ್ದೇಶಕಿ ಡಾ.ಪದ್ಮಪ್ರಿಯದರ್ಶಿನಿ, ಬೆಳಗಾವಿಯ ಜೆಎನ್‌ಎಂಸಿಯ ಡಬ್ಲ್ಯುಎಚ್‌ಒ ಕೊಲ್ಯಾಬ್‌ರೇಟಿಂಗ್ ಸೆಂಟರ್‌ನ ಮುಖ್ಯಸ್ಥ ಪ್ರೊ.ಶಿವಪ್ರಸಾದ್ ಗೌಡರ, ನವದೆಹಲಿಯ ಐಸಿಎಂಆರ್– ಕ್ಲಿನಿಕಲ್ ಟ್ರಯಲ್ ನೆಟ್‌ವರ್ಕ್ ಮುಖ್ಯಸ್ಥೆ ಡಾ.ಅಪರ್ಣಾ ಮುಖರ್ಜಿ, ಗೋರಖಪುರದ ಏಮ್ಸ್‌ನ ಚೆನ್ನೈನ ಐಸಿಎಂಆರ್–ಎನ್‌ಐಆರ್‌ಟಿಯ ಡಾ.ತೇಜಸ್ ಪಟೇಲ್, ಭುಬನೇಶ್ವರದ ಐಸಿಎಂಎಸ್–ಆರ್‌ಎಂಆರ್‌ಸಿಯ ಡಾ.ಜಯಾ ಸಿಂಗ್ ಕ್ಷತ್ರಿ, ಬೆಳಗಾವಿಯ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ಆ್ಯಂಡ್ ರಿಸರ್ಚ್‌ನ ಕುಲಸಚಿವ ಪ್ರೊ.ಎಂ.ಎಸ್.ಗಣಾಚಾರಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸುವರು. ಆಧುನಿಕ ಅಲೋಪತಿ, ಆಯುರ್ವೇದ, ಹೋಮಿಯೋಪಥಿ, ಯುನಾನಿ, ಡೆಂಟಲ್, ಬೇಸಿಕ್ ಸೈನ್ಸ್, ಫಾರ್ಮಸಿ ವಿಭಾಗಗಳಿಗೆ ಸಂಬಂಧಿಸಿ 10 ರಾಜ್ಯಗಳ 50ಕ್ಕೂ ಅಧಿಕ ವೈದ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಸಂಯೋಜಕ ಡಾ.ಮನಿಷ್ ಬರ್ವಾಲಿಯಾ, ನೋಡಲ್ ಕಮ್ಯುನಿಕೇಷನ್ ಆಫೀಸರ್ ಡಾ.ಬನಪ್ಪ ಅಂಗೂರ ಇತರರಿದ್ದರು.