ಜಿಲ್ಲೆ

ಗೋಕಾಕ: ಅರಭಾವಿ ಮಠದ ಶ್ರೀ ಸಿದ್ಧಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

ಬೆಳಗಾವಿ: ಅರಭಾವಿಮಠ ಗ್ರಾಮದ ದುರದುಂಡೇಶ್ವರ ಮಠದ ಸಿದ್ಧಲಿಂಗೇಶ್ವರ ಸ್ವಾಮೀಜಿ (75) ಭಾನುವಾರ ಲಿಂಗೈಕ್ಯರಾದರು.

ಮಠದಲ್ಲಿ ರಾತ್ರಿ ಪೂಜೆಗೆ ಸಿದ್ಧತೆ ನಡೆಸಿದ ವೇಳೆ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಗೋಕಾಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಶ್ರೀಗಳು ಹೃದಯಾಘಾತದಿಂದ ಕೊನೆಯುಸಿರು ಎಳೆದಿದ್ದಾಗಿ ವೈದ್ಯರು ತಿಳಿಸಿದರು ಎಂದು ಮಠದ ಮೂಲಗಳು ತಿಳಿಸಿವೆ. ಸ್ವಾಮೀಜಿ ನಿಧನದಿಂದ ಭಕ್ತ ಸಮೂಹ ಶೋಕ ಸಾಗರದಲ್ಲಿ ಮುಳುಗಿದೆ.

ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆ ಮುಂಭಾಗ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ದೂರ ದೂರದೂರುಗಳಿಂದ ಭಕ್ತರು ಸ್ವಾಮೀಜಿಗಳ ಅಂತಿಮ ದರ್ಶನ ಪಡೆಯಲು ಮಠದತ್ತ ತೆರಳುತ್ತಿದ್ದಾರೆ.

ರಾಮದುರ್ಗ ತಾಲ್ಲೂಕಿನ ಸಾಲಹಳ್ಳಿಯಲ್ಲಿ ಜನಿಸಿದ ಶ್ರೀಗಳು, 1977ರಲ್ಲಿ ಈ ಮಠದ ಪೀಠ ಅಲಂಕರಿಸಿದ್ದರು. ಅವರ ಪೂರ್ವಾಶ್ರಮದ ತಂದೆಯ ಹೆಸರು ಶಿವಯ್ಯ, ತಾಯಿಯ ಹೆಸರು ಶಿವಮ್ಮ. ಈ ಮಠದ 11ನೇ ಪೀಠಾಧಿಪತಿ ಇವರಾಗಿದ್ದರು ಎಂದು ಮಠದ ಭಕ್ತರು ತಿಳಿಸಿದ್ದಾರೆ.