ಜಿಲ್ಲೆ

ಬೆಳಗಾವಿ ಜಿಲ್ಲೆಯಲ್ಲಿ ಕರೊನಾಗೆ 2ನೇ ಬಲಿ

Belagavi

ಬೆಳಗಾವಿ: ಕರೊನಾ ವೈರಸ್‌ಗೆ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ 32 ವರ್ಷದ ಟೆಕ್ಕಿ ಸೋಮವಾರ ತಡರಾತ್ರಿ ಬಲಿಯಾಗಿದ್ದು, ಜಿಲ್ಲೆಯಲ್ಲಿ ಕರೊನಾದಿಂದ ಮೃತಪಟ್ಟವರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.

ಉಸಿರಾಟ ಸಮಸ್ಯೆ, ಜ್ವರದಿಂದ ಬಳಲುತ್ತಿದ್ದ ಈ ವ್ಯಕ್ತಿಯನ್ನು ಜೂನ್ 27ರಂದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಈ ವ್ಯಕ್ತಿಗೆ ಕರೊನಾ ಸೋಂಕು ತಗುಲಿರುವುದು ಮಂಗಳವಾರ ದೃಢಪಟ್ಟಿದೆ.

ತಾಲೂಕು ಆಡಳಿತ ಕೋವಿಡ್-19 ಮಾರ್ಗಸೂಚಿಯಂತೆ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಅಂತ್ಯ ಸಂಸ್ಕಾರ ನೆರವೇರಿಸಿದೆ. ಈ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 8 ಜನರನ್ನು ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದ 12 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಎಸ್. ಕೊಪ್ಪದ ತಿಳಿಸಿದ್ದಾರೆ. ಲಂಡನ್‌ನಲ್ಲಿ ನೆಲೆಸಿದ್ದ ಈ ವ್ಯಕ್ತಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು. ಜನವರಿ 15ಕ್ಕೆ ಅಥಣಿಗೆ ಮರಳಿದ್ದರು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಲಂಡನ್‌ಗೆ ಹೋಗಿರಲಿಲ್ಲ. ಊರಲ್ಲೇ ಇದ್ದುಕೊಂಡು ವರ್ಕ್ ಫ್ರಮ್ ಹೋಂ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಮತ್ತಿಬ್ಬರಿಗೆ ಕೋವಿಡ್ ಸೋಂಕು: ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ಎರಡು ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಿಂದ ಆಗಮಿಸಿದ್ದ ಬೆಳಗಾವಿ ನಗರದ 25 ವರ್ಷದ ಯುವತಿ ಹಾಗೂ ಅಥಣಿ ತಾಲೂಕಿನ 32 ವರ್ಷದ ಯುವಕನಲ್ಲಿ ವೈರಸ್ ದೃಢವಾಗಿದೆ. ಅಥಣಿ ತಾಲೂಕಿನ ಸೋಂಕಿತ ಯುವಕ ಸೋಮವಾರ ತಡರಾತ್ರಿಯೇ ವೈರಸ್‌ಗೆ ಬಲಿಯಾಗಿದ್ದು, ಮಂಗಳವಾರ ಸೋಂಕು ಇರುವ ವರದಿ ಬಂದಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 322ಕ್ಕೆ ಏರಿಕೆಯಾಗಿದೆ. ಇಬ್ಬರು ಸೋಂಕಿತರು ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರು ವೈರಸ್‌ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಮಂಗಳವಾರ ಬಿಡುಗಡೆಯಾಗಿದ್ದಾರೆ. ಬಿಡುಗಡೆಯಾದವರ ಸಂಖ್ಯೆ 306ಕ್ಕೆ (ಬಾಗಲಕೋಟೆಯ 8 ವ್ಯಕ್ತಿಗಳು ಸೇರಿ) ಏರಿಕೆಯಾಗಿದೆ.