ಬೆಳಗಾವಿ: ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಜೈ ಕಿಸಾನ ಹೋಲ್‌ಸೇಲ್ ವೆಜಿಟೇಬಲ್ ಮಾರ್ಕೆಟ್ ಆಸೋಸಿಯೇಶನ್‌ನಿಂದ ಅನಧಿಕೃತವಾಗಿ ಆರಂಭಿಸಿರುವ ಖಾಸಗಿ ತರಕಾರಿ ಮಾರುಕಟ್ಟೆ ಪರವಾನಗಿ ರದ್ದುಪಡಿಸುವಂತೆ ಒತ್ತಾಯಿಸಿ ಬೆಳಗಾವಿ ಜಿಲ್ಲಾ ಸಗಟು ತರಕಾರಿ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದಿಂದ ಶುಕ್ರವಾರ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಯಿತು.
ಖೊಟ್ಟಿ ದಾಖಲೆಗಳನ್ನು ಕೊಟ್ಟು ಸರ್ವೇ ನಂ. 677, 678, 979/1, 680/1, 686/1, 686/2, 696, 697/2, 698/1, 698/2ರಲ್ಲಿ ಅನಧಿಕೃತ ಖಾಸಗಿ ತರಕಾರಿ ಮಾರುಕಟ್ಟೆ ಕಟ್ಟಡ ನಿರ್ಮಿಸಲಾಗಿದೆ. ಇದರ ಬಗ್ಗೆ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಖಾಸಗಿ ತರಕಾರಿ ಮಾರುಕಟ್ಟೆ ಆರಂಭಿಸುವುದಕ್ಕೆ ಸರ್ಕಾರದ ಅಧಿಕಾರಿಗಳ ಕೈವಾಡವಿದೆ. ರಾಜ್ಯ ಸರ್ಕಾರ ಹಾಗೂ ರೈತರಿಗೆ ಸೆಡ್ಡು ಹೊಡೆದು ಅಧಿಕಾರಿಗಳು ಖಾಸಗಿ ತರಕಾರಿ ಮಾರುಕಟ್ಟೆ ಪ್ರಾರಂಭಿಸಲು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ದಾಖಲೆಗಳನ್ನು ತಿರುಚಿ ಸರ್ಕಾರಕ್ಕೆ ಬರಬೇಕಾಗಿದ್ದ ತೆರಿಗೆಯನ್ನು ನಷ್ಟ ಮಾಡಿದ್ದಾರೆ. ಹೀಗಾಗಿ ಮಾರುಕಟ್ಟೆ ನಿರ್ಮಾಣಕ್ಕೆ ನೀಡಿರುವ ಪರವಾನಗಿ ರದ್ದುಪಡಿಸಿ, ಈ ಅಕ್ರಮ ವ್ಯವಹಾರದಲ್ಲಿ ಶಾಮೀಲಾಗಿರುವವರು ಹಾಗೂ ಸರ್ಕಾರದ ಬೊಕ್ಕಸಕ್ಕೆ ಹಾನಿ ಮಾಡಿ, ಕಾನೂನು ಉಲ್ಲಂಘಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರಿಗೆ ಮನವಿ ಸಲ್ಲಿಸಿದರು. ಈ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು.
ಸತೀಶ್ ಪಾಟೀಲ, ಸದಾ ಪಾಟೀಲ, ಬಸನಗೌಡ ಪಾಟೀಲ, ಬಸು ಸಾಲಾಪುರಕರ, ವಿ. ಕರಣಸಿಂಗ್ ಕದಮ್, ಗಣೇಶ್‌ಕುಮಾರ ಇತರರಿದ್ದರು.