ಬೆಳಗಾವಿ : ವಿಧಾನಸಭೆ ಚುನಾವಣೆ ಫಲಿತಾಂಶ ದಿನ ಪಾಕ್ ಪರ ಜೈಕಾರ ಹಾಕಿದ ಪ್ರಕರಣದ ಆರೋಪಿಗಳನ್ನು ಬಂಧಿಸಿ, ಶೀಘ್ರ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು ನಗರ ಪೊಲೀಸ್ ಆಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.
ಮೇ 13 ರಂದು ಬೆಳಗಾವಿಯ ಆರ್‌ಪಿಡಿ ವೃತ್ತದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಕಿಡಿಗೇಡಿಗಳ ಬಂಧನಕ್ಕಾಗಿ ಮೇಯರ್ ಶೋಭಾ ಸೋಮನ್ನಾಚೆ ಹಾಗೂ ಉಪಮೇಯರ್ ರೇಷ್ಮಾ ಪಾಟೀಲ ಸೇರಿದಂತೆ ವಿಎಚ್ಪಿ ಮುಖಂಡ ಕೃಷ್ಣ ಭಟ್ ಸೇರಿ ಹಲವು ಹಿಂದೂಪರ ಸಂಘಟನೆ ಮುಖಂಡರು ಆಯುಕ್ತ ಡಾ. ಬೋರಲಿಂಗಯ್ಯ ಅವರಿಗೆ ಮನವಿ ಮಾಡಿ ಬಂಧನಕ್ಕೆ ಒತ್ತಾಯಿಸಿದರು.
ವಿಶ್ವ ಹಿಂದು ಪರಿಷತ್‌ನ ಕೃಷ್ಣ ಭಟ್ ಮಾತನಾಡಿ, ರಾಜ್ಯ ವಿಧಾನ ಸಭಾ ಚುನಾವಣೆ ಫಲಿತಾಂಶ ಬಂದ ದಿನದಂದೆ ಪಾಕಿಸ್ತಾನ ಪರ ಘೋಷಣಿ ಕೇವಲ ಬೆಳಗಾವಿಯಲ್ಲಿ ಮಾತ್ರವಲ್ಲದೆ ಶಿರಸಿ ಮತ್ತು ಭಟ್ಕಳದಲ್ಲಿ ನಡೆದಿದೆ. ದೇಶದ ಸ್ವಾತಂತ್ಯ ಲಕ್ಷಾಂತರ ಜನರ ತ್ಯಾಗ ಬಲಿದಾನ ಹಾಗೂ ಬಲಿದಾನದಿಂದ ಬಂದಿದೆ ಇದು ಯಾವುದೇ ವ್ಯಕ್ತಿ ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ದೇಶ ವಿರೋಧಿ ಘೋಷಣೆ ಕೂಗಿ 10-15 ದಿನಗಳಾದರೂ ಆರೋಪಿಗಳನ್ನು ಬಂಧಿಸದಿರುವುದು ತೀವ್ರ ನೋವಾಗಿದೆ. ಕೂಡಲೇ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಆಯುಕ್ತ ಡಾ.ಬೋರಲಿಂಗಯ್ಯ ಅವರು ಪ್ರತಿಕ್ರಿಯಿಸಿ, ಈಗಾಗಲೇ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದು, ಕಾನೂನು ಕ್ರಮ ಜರುಗಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸವಿತಾ ಕಾಂಬಳೆ, ವೀಣಾ ಗಸ್ತಿ, ಪ್ರತಿಮಾ ಜೋಶಿ, ಸದಾಶಿವ ಹಿರೇಮಠ, ಆನಂದ ಕರಲಿಂಗಣ್ಣವರ, ಡಾ.ನಾನಾಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.