ಜಿಲ್ಲೆ

ಬೆಳಗಾವಿ ನಗರ ಪೊಲೀಸರ ಜಂಟಿ ಕಾರ್ಯಾಚರಣೆ ; 1.63 ಲಕ್ಷ ರೂಮೌಲ್ಯದ ಮದ್ಯ ವಶ

ಬೆಳಗಾವಿ : ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ವಾಹನ ಜಪ್ತಿ ಮಾಡಿರುವ ಬೆಳಗಾವಿ ನಗರ ಪೊಲೀಸರು ಭಾನುವಾರ 1.63 ಲಕ್ಷ ರೂ.ಮೌಲ್ಯದ ಮದ್ಯ ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಚಿಕ್ಕೋಡಿ ತಾಲೂಕಿನ ಯಕ್ಸಂಬಾದ ನಿವಾಸಿ ಅನೀಲಕುಮಾರ ಲವಪ್ಪ ಹಜ್ಜಿ(53) ಬಂಧಿತ ಆರೋಪಿ. ನಗರದಲ್ಲಿನ ಬಿ.ಎಸ್.ಯಡಿಯೂರಪ್ಪ ಮಾರ್ಗದಲ್ಲಿ ಅಲ್ಟೋ ಕಾರಿನಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ  ಪಿಎಂಸಿ ಪೊಲೀಸ್ ಠಾಣೆ ಹಾಗೂ ಶಹಾಪುರ ಪೊಲೀಸ್ ಠಾಣೆ ಸಿಪಿಐಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಅನೀಲಕುಮಾರ ಹಜ್ಜಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದ್ದು, ಬಂಧಿತನಿಂದ ವಿವಿಧ ಕಂಪನಿಯ 1,23,933 ರೂ.ಮೌಲ್ಯದ ಮದ್ಯದ ಬಾಟಲಿಗಳು ಹಾಗೂ 40 ಸಾವಿರ ರೂ.ಬೆಲೆ ಬಾಳುವ ಅಲ್ಟೋ ಕಾರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಪಿಐಗಳಾದ ರಮೇಶ ಹವಜಿ, ಶಹಾಪುರ ಸನೀಲಕುಮಾರ್ ಎಚ್., ಪಿಎಸ್‌ಐಗಳಾದ ಮಂಜುನಾಥ ಭಜಂತ್ರಿ ಹಾಗೂ ಅಶೋಕ ಸೇರಿದಂತೆ ಎರಡೂ ಠಾಣೆಗಳ ಸಿಬ್ಬಂದಿ ಪಾಲ್ಗೊಂಡಿದ್ದರು.