ಜಿಲ್ಲೆ

ನಮಗೆ ಮದರಸಾಗಳು ಬೇಕಿಲ್ಲ: ಅಸ್ಸಾಂ ಸಿಎಂ

Belagavi

ಬೆಳಗಾವಿ: ನಮಗೆ ಮದರಸಾಗಳ ಅಗತ್ಯವಿಲ್ಲ. ರಾಷ್ಟ್ರ ನಿರ್ಮಾಣಕ್ಕೆ ವಿಶ್ವವಿದ್ಯಾಲಯ ಹಾಗೂ ಶಾಲೆ-ಕಾಲೇಜುಗಳ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಅಸ್ಸಾಂನಲ್ಲಿರುವ ಎಲ್ಲ ಮದರಸಾಗಳನ್ನು ಮುಚ್ಚುತ್ತೇನೆ ಎಂದು ಅಸ್ಸಾಂ ಮುಖ್ಯಮಂತ್ರಿ ಹೀಮಂತ ಬಿಸ್ವಾಸ ಶರ್ಮಾ ಕುಟುಕಿದರು.


 ಶಹಾಪುರ ಶಿವಾಜಿ ಉದ್ಯಾನ ಬಳಿ ನಿರ್ಮಿಸಿರುವ ‘ಶಿವಚರಿತ್ರೆ ವಸ್ತು ಪ್ರದರ್ಶನ ತಾಣ’ ಉದ್ಘಾಟಿಸಿ ಅವರು ಮಾತನಾಡಿದರು. ಈ ಹಿಂದೆ ಮೊಘಲರು ದೇಶ ಹಾಳು ಮಾಡಲು ಪ್ರಯತ್ನಿಸಿದ್ದರು. ಪ್ರಸ್ತುತ ಕಾಂಗ್ರೆಸ್ಸಿನವರು ಆ ದಾರಿಯಲ್ಲಿ ಸಾಗುತ್ತಿದ್ದಾರೆ. ರಾಮಮಂದಿರ ಬಗ್ಗೆ ಎಂದೂ ಮಾತನಾಡದ ಕಾಂಗ್ರೆಸ್‌ನವರು ಕೇವಲ ಬಾಬರಿ ಮಸೀದಿ ಬಗ್ಗೆ ಮಾತನಾಡುತ್ತಾರೆ. ಜನರು ಅವರಿಗೆ ತಕ್ಕ ಪಾಠ ಕಲಿಸಬೇಕಿದೆ. ಕಾಂಗ್ರೆಸ್ಸಿಗರು ಹಿಂದಿನ ಮೊಘಲರಿಗೆ ಸಮಾನ. ಅವರನ್ನು ದೇಶದಿಂದ ಬೇರು ಸಮೇತ ಕಿತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಲ ತುಂಬಬೇಕು ಎಂದರು.
 ಇತಿಹಾಸಕಾರರು ಇಡೀ ದೇಶ ಔರಂಗಜೇಬನ ಕೈಯಲ್ಲಿದೆ ಎಂದು ಬರೆದಿದ್ದಾರೆ. ಆದರೆ, ಶಿವಾಜಿ ಮಹಾರಾಜರು ಔರಂಗಜೇಬನಿಗಿಂತ ನೂರು ಪಟ್ಟು ಪರಾಕ್ರಮಿಯಾಗಿದ್ದರು. ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರು ಈ ದೇಶದ ಇತಿಹಾಸ ಬಾಬರ್, ಔರಂಗಜೇಬನದು ಎಂದರು. ಆದರೆ, ವಾಸ್ತವವಾಗಿ ಭಾರತದ ಇತಿಹಾಸ ಶಿವಾಜಿಯದಾಗಿದೆ ಎಂದರು.
 ಶಾಸಕ ಅಭಯ ಪಾಟೀಲ ಮಾತನಾಡಿ, ಧ್ವನಿ ಮತ್ತು ಬೆಳಕು ಪ್ರದರ್ಶನದ ಮೂಲಕ ನೀರಿನ ಮೇಲೆ ಶಿವಚರಿತ್ರೆ ಪ್ರದರ್ಶನಗೊಳ್ಳುತ್ತಿರುವುದು ದೇಶದಲ್ಲೇ ಮೊದಲು. ಶಿವಾಜಿ ಮಹಾರಾಜರ ಜೀವನದಲ್ಲಿ ನಡೆದ ಹಲವು ಘಟನೆಗಳನ್ನು ಯುವಪೀಳಿಗೆಗೆ ಪರಿಚಯಿಸಲು ಶಿವಚರಿತ್ರೆ ನಿರ್ಮಿಸಲಾಗಿದೆ ಎಂದರು. ಸಾಹಿತಿ ಡಾ. ಸರಜೂ ಕಾಟ್ಕರ್, ಮೇಯರ್ ಶೋಭಾ ಸೋಮನ್ನಾಚೆ, ಉಪಮೇಯರ್ ರೇಷ್ಮಾ ಪಾಟೀಲ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ನಿರ್ಮಲಕುಮಾರ ಸುರಾನಾ, ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ಮುಳೆ, ಮಹಾನಗರ ಪಾಲಿಕೆ ಸದಸ್ಯ ಜಯಂತ ಜಾಧವ, ಎಂ.ಬಿ.ಝಿರಲಿ, ರಾಜು ಭಾತಕಾಂಡೆ, ವಿನೋದ ಗಾಯಕವಾಡ ಇತರರಿದ್ದರು. ಶಾಸಕ ಅನಿಲ ಬೆನಕೆ ಸ್ವಾಗತಿಸಿದರು.