ಮಂಗಳೂರು: ಬೇಕಲ ಅಂತಾರಾಷ್ಟ್ರೀಯ ಬೀಚ್ ಉತ್ಸವದ ದ್ವಿತೀಯ ಆವೃತ್ತಿ ಡಿ.22ರಿಂದ 31 ತನಕ ಕಾಸರಗೋಡು ಜಿಲ್ಲೆಯ ಪಳ್ಳಿಕೆರೆ ಬೇಕಲ್ ಬೀಚ್ ಪಾರ್ಕ್‌ನಲ್ಲಿ ವೈವಿಧ್ಯಮಯ ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
10 ದಿನ ನಡೆಯುವ ಈ ಉತ್ಸವ ಕೇರಳ ಪ್ರವಾಸೋದ್ಯಮ ಇತಿಹಾಸದಲ್ಲಿ ಮೈಲಿಗಲ್ಲು ಆಗಲಿದೆ. ಉತ್ಸವವು ಬೇಕಲ ಮತ್ತು ಕಾಸರಗೋಡಿನ ಇತಿಹಾಸ, ಸಂಸ್ಕೃತಿ, ಭಾಷಾ ವೈವಿಧ್ಯ, ಕಲಾ ಪ್ರಕಾರ, ಅಭಿವೃದ್ಧಿ ಪರಿಕಲ್ಪನೆ ಮತ್ತು ಪ್ರವಾಸೋದ್ಯಮದ ಪ್ರಗತಿಯ ಆಶಯ ಹೊಂದಿದೆ ಎಂದು ಉತ್ಸವ ಸಂಘಟನಾ ಸಮಿತಿ ಅಧ್ಯಕ್ಷ, ಉದುಮ ಶಾಸಕ ಸಿ.ಎಚ್.ಕುಂಞಂಬು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇರಳ ವಿಧಾನಸಭೆ ಸ್ಪೀಕರ್ ಎ.ಎನ್.ಸಂಶೀರ್ ಡಿ.22ರಂದು ಸಂಜೆ 5.30ಕ್ಕೆ ಉದ್ಘಾಟಿಸುವರು. ಪ್ರತಿಪಕ್ಷ ನಾಯಕ ಪಿ.ಕೆ.ಕುಂಞಾಲಿ ಕುಟ್ಟಿ, ಜಾದೂಗಾರ ಗೋಪಿನಾಥ್ ಮುತ್ತುಕಾಡ್, ಚಿತ್ರ ನಿರ್ದೇಶಕ ಶಾಜಿ ಎನ್., ಕರುಣ್, ಗೀತ ರಚನೆಕಾರ ರಫೀಕ್ ಅಹ್ಮದ್ ಪಾಲ್ಗೊಳ್ಳವರು ಎಂದರು.
- ರೈಲುಗಳಿಗೆ ನಿಲುಗಡೆ:
ಉತ್ಸವದ ಅವಧಿಯಲ್ಲಿ ಬೇಕಲದಲ್ಲಿ ಎಗ್ಮೋರ್, ಪರಶುರಾಮ ಎಕ್ಸ್‌ಪ್ರೆಸ್ ಮತ್ತು ವೆಸ್ಟ್‌ಕೋಸ್ಟ್ ರೈಲುಗಳಿಗೆ ನಿಲುಗಡೆ ಒದಗಿಸಲು ದಕ್ಷಿಣ ರೈಲ್ವೆ ಒಪ್ಪಿದೆ. ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ ಒದಗಿಸಲು ರೈಲ್ವೆ ಹಾಗೂ ಖಾಸಗಿ ವ್ಯಕ್ತಿಗಳ ಒಟ್ಟು 30 ಎಕರೆ ಪ್ರದೇಶ ಜಮೀನು ಮೀಸಲಿಡಲಾಗುವುದು. ಪ್ರತಿದಿನ ಬೆಳಗ್ಗೆ 11 ಗಂಟೆಯಿಂದ ಉತ್ಸವಕ್ಕೆ ಪ್ರವೇಶ ದೊರೆಯಲಿದೆ. ಬೀಚ್‌ನಲ್ಲಿ ಶೈಕ್ಷಣಿಕ, ಮನರಂಜನೆ ಮತ್ತು ಸಾಹಸ ಕಾರ್ಯಕ್ರಮಗಳು, ಆಹಾರ, ವಾಣಿಜ್ಯ ಮಳಿಗೆಗಳು ಇರಲಿವೆ ಎಂದು ಮಾಹಿತಿ ನೀಡಿದರು.
ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ, ಬೇಕಲ್ ರೆಸಾರ್ಟ್ಸ್ ಡೆವೆಲಪ್‌ಮೆಂಟ್ ಕಾರ್ಪೊರೇಷನ್ (ಬಿಆರ್‌ಡಿಸಿ) ವ್ಯವಸ್ಥಾಪಕ ನಿರ್ದೇಶಕ ಶಿಜಿನ್ ಪಿ, ವ್ಯವಸ್ಥಾಪಕ ಯು.ಎಸ್.ಪ್ರಸಾದ್, ಕಾಂಞಂಗಾಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಣಿಕಂಠನ್ ಕೆ., ಸಂಘಟನಾ ಸಮಿತಿಯ ಲತೀಫ್ ಸುದ್ದಿಗೋಷ್ಠಿಯಲ್ಲಿದ್ದರು.
- ಏನೇನಿವೆ?
ಉತ್ಸವದ ಪ್ರಮುಖ ವೇದಿಕೆ ಚಂದ್ರಗಿರಿಯಲ್ಲಿ ಪ್ರತಿದಿನ ರಾತ್ರಿ 7 ಗಂಟೆಯಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. 22ರಂದು ತೈಕ್ಕುಡಂ ಬ್ರಿಡ್ಜ್‌ನಿಂದ ಮೆಗಾ ಲೈವ್ ಮ್ಯೂಸಿಕ್ ಬ್ಯಾಂಡ್, 23ರಂದು ಶಿವಮಣಿ, ಪ್ರಕಾಶ್, ಉಳ್ಳಿಯೇರಿ, ಶರತ್ ಬಳಗದಿಂದ ಮ್ಯೂಸಿಕಲ್ ಫ್ಯೂಷನ್ ಟ್ರಯೋ ಪ್ರದರ್ಶನ, 24ರಂದು ಕೆ.ಎಸ್.ಚಿತ್ರಾ ಮತ್ತು ತಂಡದಿಂದ ‘ಚಿತ್ರ ವಸಂತಂ’ ಸಂಗೀತ ಔತಣ, 25ರಂದು ಎಂ.ಜಿ.ಶ್ರೀ ಕುಮಾರ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ, 26ರಂದು ಶೋಭನಾ ಮತ್ತು ಬಳಗದಿಂದ ನೃತ್ಯ ಮೇಳ, 27ರಂದು ಪದ್ಮಕುಮಾರ್ ಮತ್ತು ಬಳಗದಿಂದ ಓಲ್ಡ್ ಈಸ್ ಗೋಲ್ಡ್ ಸಂಗೀತ ಮಾಧುರ್ಯ, 28ರಂದು ಅತುಲ್ ನರುಕರ ಅವರಿಂದ ಸೋಲ್ ಆಫ್ ಫೋಕ್, ಫೋಕ್ ಬ್ಯಾಂಡ್, 29ರಂದು ಮಾಪಿಳ್ಳೆ ಹಾಡುಗಾರ ಕಣ್ಣೂರು ಶರೀಫ್ ಮತ್ತು ಬಳಗದಿಂದ ಮಾಪಿಳ್ಳ ಹಾಡುಗಳ ರಾತ್ರಿ, 30ರಂದು ಗೌರಿ ಲಕ್ಷ್ಮೀ ಅವರಿಂದ ಮ್ಯೂಸಿಕಲ್ ಬ್ಯಾಂಡ್, 31ರಂದು ರಾಸ ಬೇಗಂ ಮತ್ತು ತಂಡದಿಂದ ಗಜಲ್ ಮತ್ತು ಹೊಸ ವರ್ಷಾಚರಣೆ ಅಂಗವಾಗಿ ವಿಶೇಷ ಕಾರ್ಯಕ್ರಮ, ಬೇಕಲ ಕಿನಾರೆಯಲ್ಲಿ ಸುಡುಮದ್ದು ಪ್ರದರ್ಶನ ಆಯೋಜಿಸಲಾಗಿದೆ. ತೇಜಸ್ವಿನಿ ವೇದಿಕೆಯಲ್ಲಿ ಜಿಲ್ಲೆಯ ಕುಟುಂಬಶ್ರೀ ಕಾರ್ಯಕರ್ತೆಯರು ಮತ್ತು ಇತರ ಕಲಾವಿದರಿಂದ ಎಲ್ಲ 10 ದಿನಗಳು ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಮೋಹಿನಿಯಾಟ್ಟಂ, ಭರತನಾಟ್ಯ, ಕೂಚುಪುಡಿ, ತಿರುವಾತಿರಕಳಿ, ಮಂಗಳಂಕಳಿ, ಒಪ್ಪನ, ಸಿನಿಮಾ ನೃತ್ಯ, ಜಾನಪದ ನೃತ್ಯ, ಸಮೂಹ ನೃತ್ಯ, ಯೋಗ ನೃತ್ಯ, ಅಸ್ಸಾಮಿ ನೃತ್ಯ, ಯಕ್ಷಗಾನ ಮತ್ತು ರಾಜಸ್ಥಾನಿ ನೃತ್ಯ ಕಾರ್ಯಕ್ರಮಗಳು ಕುಟುಂಬಶ್ರೀ ಮತ್ತು ಸಿಡಿಎಸ್‌ಎಸ್ ನೇತೃತ್ವದಲ್ಲಿ ನಡೆಯಲಿದೆ.