ಜಿಲ್ಲೆ

ಶುರುವಾಗಿದೆ ತೆರೆಮರೆಯ ಕಸರತ್ತು

Dharwada - Vikram Nadiger

ವಿಕ್ರಮ ನಾಡಿಗೇರ ಧಾರವಾಡ

ಕನ್ನಡ ನಾಡು, ನುಡಿಗಾಗಿ ಶ್ರಮಿಸುವಲ್ಲಿ ರಾಜ್ಯದಲ್ಲಿ ಮುಂಚೂಣಿಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್​ ಜತೆಗೆ ಕರ್ನಾಟಕ ವಿದ್ಯಾವರ್ಧಕ ಸಂಘವೂ ಒಂದು. ಮೂರು ವರ್ಷಕ್ಕೊಮ್ಮೆ ನಡೆಯುವ ಸಂಘದ ಚುನಾವಣೆಗೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ಆಕಾಂಕ್ಷಿಗಳು ತೆರೆಮರೆಯಲ್ಲೇ ಕಸರತ್ತು ಆರಂಭಿಸಿದ್ದಾರೆ.

ಮೇ 25ರಂದು ಚುನಾವಣೆಗೆ ದಿನಾಂಕ ನಿಗದಿಯಾಗಿದೆ. 100 ವರ್ಷಗಳ ಇತಿಹಾಸ ಹೊಂದಿರುವ ಸಂಘಕ್ಕೆ ಸತತ 53 ವರ್ಷಗಳ ಕಾಲ ಡಾ. ಪಾಟೀಲ ಪುಟ್ಟಪ್ಪ ಅಧ್ಯಕ್ಷರಾಗಿದ್ದರು. ಅವರ ನಿಧನದ ಬಳಿಕ ನಡೆದ ಮೊದಲ ಚುನಾವಣೆ (2021ರ ನವೆಂಬರ್​) ಸಾಕಷ್ಟು ಕುತೂಹಲ ಕೆರಳಿಸಿತ್ತು. ಸಮಾನ ಮನಸ್ಕರ ವೇದಿಕೆ, ಚಂದ್ರಕಾಂತ ಬೆಲ್ಲದ ಬಣ ಹಾಗೂ ಕನ್ನಡ ಗುಡಿಯ ಧೀರರ ಅನುಭವ ಮಂಟಪ ಬಣಗಳ ಮಧ್ಯೆ ಏರ್ಪಟ್ಟಿದ್ದ ಪೈಪೋಟಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚಂದ್ರಕಾಂತ ಬೆಲ್ಲದ ಮಾತ್ರ ಸ್ಪರ್ಧಿಸಿದ್ದರು. ಉಳಿದಂತೆ ಹನುಮಾಕ್ಷಿ ಗೋಗಿ, ಸಂಜೀವ ದುಮಕನಾಳ, ಬಸಯ್ಯ ಶಿರೋಳ ಸ್ವತಂತ್ರರಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಹೀಗಾಗಿ ಪ್ರಬಲ ಅಭ್ಯರ್ಥಿ ಚಂದ್ರಕಾಂತ ಬೆಲ್ಲದ ಸರಳವಾಗಿ 2382 ಮತಗಳನ್ನು ಪಡೆದು ಆಯ್ಕೆಯಾಗಿದ್ದರು.

15 ಸ್ಥಾನಗಳ ಚುನಾವಣೆಗೆ ಮೂರು ಬಣಗಳು ಸ್ಪರ್ಧಿಸಿದ್ದರೂ ಒಂದೇ ಬಣಕ್ಕೆ ಸ್ಪಷ್ಟ ಮತಗಳು ಸಿಕ್ಕಿರಲಿಲ್ಲ. ಚಂದ್ರಕಾಂತ ಬೆಲ್ಲದ ಹಾಗೂ ಸಮಾನ ಮನಸ್ಕರ ವೇದಿಕೆ ಬಣಗಳು ಸಮನಾಗಿ 7 ಸ್ಥಾನಗಳನ್ನು ಪಡೆದಿದ್ದರೆ, ಕೋಶಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಸಮಾನಾಂತರ (1687) ಮತಗಳನ್ನು ಪಡೆದಿದ್ದರು. ಹೀಗಾಗಿ ಎರಡು ಬಣಗಳು ಸೇರಿ ಆಡಳಿತ ನಡೆಸುವಂತಾಗಿತ್ತು.

ಸುಮಾರು 10 ಸಾವಿರ ಸದಸ್ಯರನ್ನು ಹೊಂದಿರುವ ಸಂಘದ ಪ್ರಸಕ್ತ ಸಾಲಿನ ಚುನಾವಣೆಗೆ ಸದ್ಯದ ಆಡಳಿತ ಮಂಡಳಿಯೂ ಸ್ಪರ್ಧಿಸಲಿದೆ. ಆದರೆ ಸಮಾನ ಮನಸ್ಕರ ವೇದಿಕೆಯಿಂದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಪ್ರೊ. ಮಾಲತಿ ಪಟ್ಟಣಶೆಟ್ಟಿ ಈ ಬಾರಿ ಆಸಕ್ತಿ ತೋರದ ಕಾರಣ ಆ ಸ್ಥಾನಕ್ಕೆ ಅದೇ ಬಣದಿಂದ ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ. ಸಂಜೀವ ಕುಲಕರ್ಣಿ ಸ್ಪರ್ಧಿಸಲಿದ್ದಾರೆ. ಕಾಕಾ ಸಮಿತಿಗೆ ಡಾ. ಸಂಜೀವ ಕುಲಕರ್ಣಿ ಬದಲು ಶಿವಾನಂದ ಭಾವಿಕಟ್ಟಿ ಸ್ಪರ್ಧೆ ನಡೆಸಲಿದ್ದಾರೆ.

ಅಧ್ಯಕ್ಷ ಚಂದ್ರಕಾಂತ ಬೆಲ್ಲದ ರಾಜಕೀಯದಲ್ಲೂ ಅನುಭವಿಗಳು. ಇವರು ಗಟ್ಟಿ ಧ್ವನಿ ಎತ್ತುವ ಮೂಲಕ ಸರ್ಕಾರದಿಂದ ಅನುದಾನ ತರುವ ಕೆಲಸ ಮಾಡಬೇಕಿತ್ತು. ಅಂತಹ ಯಾವುದೇ ಕೆಲಸಗಳಾಗದ ಕಾರಣ ಈ ಬಾರಿಯಾದರೂ ಸಮರ್ಥರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿ. ಸಂಘವನ್ನು ಇನ್ನಷ್ಟು ಎತ್ತರಕ್ಕೇರಿಸಲಿ ಎಂಬ ಮಾತು ಸಾಹಿತ್ಯ ವಲಯದಲ್ಲಿ ಕೇಳಿ ಬರುತ್ತಿದೆ. ಹೀಗಾಗಿ ಕೊನೇ ಕ್ಷಣದಲ್ಲಿ ಏನೆಲ್ಲ ಬದಲಾವಣೆ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.