ವಿಜಯಪುರ ನಗರದಲ್ಲಿ ಎಬಿವಿಪಿ ಕಾರ್ಯಕರ್ತರು ಭಿಕ್ಷಾಟನೆ ಮೂಲಕ ರಾಜ್ಯ ಸರ್ಕಾರದ ವಿರುದ್ಧ ವಿನೂತನವಾಗಿ ಪ್ರತಿಭಟಿಸಿದರು. ಸಂದೀಪ ಅರಳಗುಂಡಿ, ಸ್ನೇಹಾ ಹಿರೇಮಠ, ಸುರೇಶ ಲೋಣಾರ, ಪ್ರಶಾಂತ ಗುಗದಡ್ಡಿ ಮತ್ತಿತರರಿದ್ದಾರೆ.  
ಜಿಲ್ಲೆ

ವಿಶ್ವ ವಿದ್ಯಾಲಯಗಳ ಉಳುವಿಗಾಗಿ ಭಿಕ್ಷಾಟನೆ, ಎಬಿವಿಪಿಯಿಂದ ವಿನೂತನ ಪ್ರತಿಭಟನೆ

ವಿಜಯಪುರ: ರಾಜ್ಯದ 9 ವಿಶ್ವ ವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ಭಿಕ್ಷಾಟನೆ ಕೈಗೊಳ್ಳುವ ಮೂಲಕ ವಿನೂತನವಾಗಿ ಪ್ರತಿಭಟಿಸಲಾಯಿತು.

ನಗರದ ಮಹಾತ್ಮ ಗಾಂಧಿ ವೃತ್ತ, ಬಸವೇಶ್ವರ ವೃತ್ತ ಹಾಗೂ ಕೇಂದ್ರ ಬಸ್ ನಿಲ್ದಾಣದಲ್ಲಿ ಪರಿಷತ್ ಪದಾಧಿಕಾರಿಗಳು ಭಿಕ್ಷೆ ಯಾಚಿಸಿ ಹಣ ಸಂಗ್ರಹಿಸಿದರು. ವಿಶ್ವ ವಿದ್ಯಾಲಯಗಳನ್ನು ನಡೆಸಲು ಹಣ ಬೇಕಾದರೆ ಭಿಕ್ಷೆ ಬೇಡಿಯಾದರೂ ಸಂಗ್ರಹಿಸಿ ಕೊಡುತ್ತೇವೆ ಎಂಬ ಸಂದೇಶ ರವಾನಿಸಲಾಯಿತು.

ಪರಿಷತ್ ಪದಾಧಿಕಾರಿ ಸಂದೀಪ ಅರಳಗುಂಡಿ ಮಾತನಾಡಿ, ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯ ಕೇಂದ್ರಗಳು. ಅಲ್ಲಿಂದ ಹೊರಡುವ ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ವ್ಯಕ್ತಿಗಳಾಗುತ್ತಾರೆ, ಅಂತಹ ವಿಶ್ವ ವಿದ್ಯಾಲಯಗಳಿಗೆ ಮೂಲ ಸೌಲಭ್ಯಗಳನ್ನು ನೀಡುವುದು ಸರ್ಕಾರಗಳ ಆದ್ಯ ಕರ್ತವ್ಯ. ಆದರೆ ಕರ್ನಾಟಕ ರಾಜ್ಯದಲ್ಲಿ ಹಿಂದಿನ ಸರ್ಕಾರ ಘೋಷಣೆ ಮಾಡಿದ್ದ ಹೊಸ ವಿಶ್ವ ವಿದ್ಯಾಲಯಗಳನ್ನು ಇಂದಿನ ರಾಜ್ಯ ಸರ್ಕಾರ ಮುಚ್ಚಲು ಹೊರಟಿರುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದರು.

ವಿದ್ಯಾರ್ಥಿನಿ ಸ್ನೇಹಾ ಹಿರೇಮಠ ಮಾತನಾಡಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಸಚಿವ ಸಂಪುಟದ ಉಪಸಮಿತಿಯು ಆರ್ಥಿಕ ಹಾಗೂ ಮೂಲ ಸೌಲಭ್ಯಗಳ ನೆಪ ಹೇಳಿ ವಿಶ್ವ ವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವುದು ಶಿಕ್ಷಣ ವಿರೋಧಿ ನೀತಿಯಾಗಿದೆ. ಸರ್ಕಾರಗಳು ವಿಶ್ವ ವಿದ್ಯಾಲಯಗಳ ಸ್ಥಾಪನೆ ಹಾಗೂ ಮುಚ್ಚುವ ಮನಸೋ ಇಚ್ಛೆ ಕಾರ್ಯದಿಂದ ವಿಶ್ವ ವಿದ್ಯಾಲಯಗಳ ಮೇಲೆ ಮತ್ತು ಶೈಕ್ಷಣಿಕ ಕ್ಷೇತ್ರದ ಮೇಲೆ ಇರುವ ವಿಶ್ವಾಸಾರ್ಹತೆ ಕಡಿಮೆಯಾಗುತ್ತದೆ. ವಿಶ್ವ ವಿದ್ಯಾಲಯಗಳ ಕುರಿತು ಯಾವುದೇ ನಿರ್ಣಯ ತೆಗೆದುಕೊಳ್ಳಬೇಕಾದರೆ ಶಿಕ್ಷಣ ತಜ್ಞರ ಸಲಹೆಗಳನ್ನು ತೆಗೆದುಕೊಳ್ಳಬೇಕೆ ಹೊರತು ರಾಜಕೀಯ ಕೇಂದ್ರಿತ ನಿರ್ಧಾರಗಳು ಆಗಬಾರದು ಎಂಬುದು ಎಬಿವಿಪಿಯ ಆಶಯಾಗಿದೆ ಎಂದರು.

ವಿದ್ಯಾರ್ಥಿನಿ ದಾನಮ್ಮ ಹೊಸಮನಿ ಹಾಗೂ ಐಶ್ವರ್ಯ ಆಸಂಗಿ ಮಾತನಾಡಿ, ಸಾಮಾನ್ಯವಾಗಿ 10,000 ವಿದ್ಯಾರ್ಥಿಗಳಿಗೆ ಒಂದು ವಿಶ್ವ ವಿದ್ಯಾಲಯ ಇರಬೇಕೆಂಬುವುದು ಆದರ್ಶವಾದ ವಿಚಾರವಾಗಿದೆ. ಆದರೆ ನಮ್ಮಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಕೆ ಮಾಡಿದರೆ ಈಗಿರುವ ವಿಶ್ವ ವಿದ್ಯಾಲಯಗಳ ಸಂಖ್ಯೆ ಕಡಿಮೆ ಇದೆ. ವಿದ್ಯಾರ್ಥಿಗಳ ಅಂಕಪಟ್ಟಿ, ಪ್ರಮಾಣ ಪತ್ರ ಹಾಗೂ ಇನ್ನಿತರ ಸಮಸ್ಯೆಗಳ ಪರಿಹಾರಕ್ಕೆ ಸುಮಾರು 200 ಕಿಮೀ ವಿದ್ಯಾರ್ಥಿಗಳು ಪ್ರಯಾಣ ಮಾಡಬೇಕು. ಇಂತಹ ಸಮಸ್ಯೆ ಪರಿಹಾರಕ್ಕೆ ಹೊಸ ವಿವಿಗಳು ಸಹಕಾರಿಯಾಗಬೇಕು ಎಂದರು.

ರಾಜ್ಯ ಸರ್ಕಾರ ಎರಡು ವರ್ಷ ಕಳೆದರೂ ವಿಶ್ವ ವಿದ್ಯಾಲಯಗಳ ಅಭಿವೃದ್ಧಿಗೆ ಕಿಂಚಿತ್ತು ಗಮನಕೊಡದೆ ಈಗ ಮೂಲ ಸೌಲಭ್ಯಗಳ ನೆಪವೊಡ್ಡಿ ಮುಚ್ಚುತ್ತಿರುವುದನ್ನು ನೋಡಿದರೆ ಸರ್ಕಾರ ವಿದ್ಯಾರ್ಥಿ ವಿರೋಧಿ, ಶಿಕ್ಷಣ ವಿರೋಧಿ ನೀತಿ ಅನುಸರಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ರಾಜ್ಯ ಸರ್ಕಾರ ಕೂಡಲೇ ವಿಶ್ವ ವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರದಿಂದ ಹಿಂದೆ ಸರಿದು ವಿಶ್ವವಿದ್ಯಾಲಯಗಳ ಮೂಲ ಸೌಲಭ್ಯಕ್ಕೆ ಅನುದಾನ ನೀಡಿ ವಿಶ್ವವಿದ್ಯಾಲಯಗಳ ಉನ್ನತೀಕರಣಕ್ಕಾಗಿ ಅನುದಾನ ನೀಡುವಂತೆ ಆಗ್ರಹಿಸಿದರು.

ವಿದ್ಯಾರ್ಥಿಗಳಾದ ಸುರೇಶ ಲೋಣಾರ, ಪ್ರಶಾಂತ ಗುಗದಡ್ಡಿ, ಮೋಹನ ಚಿಕ್ಕಲಕಿ, ಮಲ್ಲೇಶ ಉಪ್ಪಾರ, ತ್ರೀಶೀಲಾ ರಾಠೋಡ, ಅಶ್ವಿನಿ ಜಾಧವ, ವಿರೇಶ ತಂಬಾಕೆ, ಹರ್ಷ ಕುಲಕರ್ಣಿ, ವಿಜಯ ರಾಠೋಡ, ಭರತ ರತ್ನಾಕರ, ಸಮೇದ ಸನ್ನದಿ, ಸಮೇತ ಕೋಟೆ ಮತ್ತಿತರರಿದ್ದರು.