ಜಿಲ್ಲೆ

ಎಬಿವಿಪಿ ಕಾರ್ಯಕರ್ತರಿಂದ ಭಿಕ್ಷಾಟನೆ

ಮರಿದೇವ ಹೂಗಾರ

ಹುಬ್ಬಳ್ಳಿ: ರಾಜ್ಯದ 9 ವಿಶ್ವವಿದ್ಯಾಲಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು, ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ್ದಲ್ಲದೆ ಭಿಕ್ಷಾಟನೆ ಮಾಡಿದರು. ಸಂಗ್ರಹವಾದ ಹಣವನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಟ್ಟರು.

ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ದೇವಾಲಯ. ಇಂಥವುಗಳನ್ನೇ ಹಣದ ಕೊರತೆ ನೆಪವೊಡ್ಡಿ ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ. ಅದರಲ್ಲೂ ಬಿಜೆಪಿ ಸರ್ಕಾರ ಘೋಷಿಸಿದ್ದ ವಿಶ್ವವಿದ್ಯಾಲಯ ಮುಚ್ಚುವ ಮೂಲಕ ದ್ವೇಷ ಸಾಧಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆಯೇ ಹೊರತು ರಾಜಕೀಯದವರಿಗಲ್ಲ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಕೆಲ ಹೊತ್ತು ಸಂಚಾರ ತಡೆದು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಚನ್ನಮ್ಮ ವೃತ್ತಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದರು. ವಿಶ್ವವಿದ್ಯಾಲಯ ಮುಚ್ಚದಂತೆ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ರವಾನಿಸಲಾಯಿತು.

ಪ್ರಾಂತ ಸಂಘಟನಾ ಕಾರ್ಯದರ್ಶಿ ಪೃಥ್ವಿಕುಮಾರ, ಸಂಘಟನಾ ಕಾರ್ಯದರ್ಶಿ ಮೌನೇಶ ಗೌಡ, ಮಹಾನಗರ ಕಾರ್ಯದರ್ಶಿ ಸಿದ್ಧಾರ್ಥ ಕೋರಿ, ದಾನೇಶ ಕಿತ್ತೂರ, ಅನ್ಮೂಲ್ ಕಲಬುರ್ಗಿ, ಸುನೀಲ್ ಎಸ್., ರಕ್ಷಿತಾ ಗೋಕಾಕ, ಅರ್ಚಿತಾ ರಾವ್, ಶಶಿ ರೋಣಿಮಠ, ಲೋಕೇಶ ಚಿತ್ತೂರ ಇತರರು ಭಾಗವಹಿಸಿದ್ದರು.