ಜಿಲ್ಲೆ

ಫಸಲು ಹೆಚ್ಚಳಕ್ಕೆ ಜೇನುಹುಳುಗಳು ಸಹಕಾರಿ

Gadag - Desk - Tippanna Avadoot

ಹಾನಗಲ್ಲ: ಪ್ರತಿ ವರ್ಷ ಜೇನು ನೊಣ ದಿನ ಆಚರಿಸಲಾಗುತ್ತದೆ. ನಮ್ಮ ಪರಿಸರದಲ್ಲಿ ಜೇನು ಹುಳುಗಳ ಅಗತ್ಯತೆ ಬಹಳಷ್ಟಿದೆ. ಫಸಲಿನ ಹೆಚ್ಚಳಕ್ಕೆ ಜೇನು ಹುಳುಗಳು ಸಹಕಾರಿಯಾಗಿವೆ ಎಂದು ಡಿಎಫ್​ಒ ಎಸ್. ಬಾಲಕೃಷ್ಣ ಹೇಳಿದರು.

ಪಟ್ಟಣದ ಕೆಎಲ್​ಇ ಪದವಿಪೂರ್ವ ಕಾಲೇಜ್​ನಲ್ಲಿ ಅರಣ್ಯ ಇಲಾಖೆ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜೇನು ನೊಣ ದಿನಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ತೋಟಗಳಲ್ಲಿ ಹೂವು, ಹಣ್ಣು, ಕಾಯಿಗಳಾಗಲು ಜೇನುಕೃಷಿ ಪ್ರಮುಖ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳು ಇದರ ಮಹತ್ವ ತಿಳಿಯಬೇಕು. ಜೇನು ಹುಳುಗಳು ರೈತರ ಮಿತ್ರನಾಗಿ ಕಾರ್ಯನಿರ್ವಹಿಸುತ್ತವೆ. ಜೇನು ಸಾಕಣೆಯಿಂದ ರೈತರ ಫಸಲು ಹೆಚ್ಚುವ ಮೂಲಕ ಆರ್ಥಿಕ ಅಭಿವೃದ್ಧಿ ಸಾಧ್ಯವಿದೆ ಎಂದರು.

ಶಿರಶಿಯ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಮಾತನಾಡಿ, ಅಳಿವಿನಂಚಿನಲ್ಲಿರುವ ಔಷಧೀಯ ಸಸ್ಯಗಳನ್ನು ಬೆಳೆಸಿದರೆ ಜೇನುಕೃಷಿಗೆ ಪೂರಕವಾಗಲಿದೆ. ಜೇನಿನ ಉಪ ಉತ್ಪನ್ನಗಳನ್ನು ತಯಾರಿಸಿದರೆ ಲಾಭ ಗಳಿಸಬಹುದು. ಜೇನಿನೊಂದಿಗೆ ಶುಂಠಿ, ಬೇವು, ನೆಲ್ಲಿಕಾಯಿ, ಅಡಕೆ ಮುಂತಾದವುಗಳನ್ನು ಬಳಸಿಕೊಂಡು ಉಪ ಉತ್ಪನ್ನಗಳ ತಯಾರಿಸಬಹುದು. ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸುವಲ್ಲಿ ಜೇನು ಸಾಕಣೆ ಪೂರಕವಾಗಲಿದೆ ಎಂದರು.

ಹಾವೇರಿ ಎಸಿಎಫ್ ಶೇಕ್ ಅಬ್ದುಲ್ ಆಲೀಂ ಸಿದ್ದಿಕಿ ಮಾತನಾಡಿ, ಜೇನುನೊಣದಿಂದ ಒಗ್ಗಟ್ಟನ್ನು ಕಲಿತುಕೊಳ್ಳಬೇಕಿದೆ. ಜೇನು ನೊಣಗಳು ಹೂವಿನಿಂದ ಹೂವಿಗೆ ಅಮೃತ ಸಂಗ್ರಹಿಸಿ ಸಿಹಿಯಾದ ಜೇನು ನೀಡುತ್ತವೆ. ಅದರೊಂದಿಗೆ ಪರಾಗಸ್ಪರ್ಷ ಮಾಡಿ, ಪರಿಸರಕ್ಕೆ ಪೂರಕ ಕಾರ್ಯ ಮಾಡುತ್ತವೆ. ಅರಣ್ಯದಲ್ಲಿ ಜೇನುನೊಣಗಳನ್ನು ಓಡಿಸದೇ ಅವುಗಳಿಂದ ಜಾಗರೂಕರಾಗಿರಬೇಕು. ಪರಿಸರಕ್ಕೆ ಜೇನುಹುಳುಗಳ ಕೊಡುಗೆ ಅತ್ಯುಪಯುಕ್ತವಾಗಿದೆ. ಮನುಷ್ಯನ ಆಯುಷ್ಯ, ಆರೋಗ್ಯ ಹೆಚ್ಚಿಸಲು ಜೇನು ತುಪ್ಪ ಸಹಕಾರಿಯಾಗಿದೆ ಎಂದರು.

ಎಸಿಎಫ್ ಶಿವಾನಂದ ತೋಡಕರ್ ಮಾತನಾಡಿ, ಆ. 19ರಂದು ರಾಷ್ಟಿ›ೕಯ ಜೇನು ನೊಣ ದಿನ ಆಚರಿಸಲಾಗುತ್ತಿದೆ ಎಂದರು.

ತೋಟಗಾರಿಕೆ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ ಮಾತನಾಡಿ, ಒಂದು ಹೆಕ್ಟೇರ್ ಪ್ರದೇಶದಲ್ಲಿ 10 ಜೇನು ಪೆಟ್ಟಿಗೆ ಇಡಬಹುದು. ಇದಕ್ಕೆ ಶೇ. 40ರಷ್ಟು ಸಹಾಯಧನ ನೀಡಲಾಗುತ್ತಿದೆ. ಮನೆ ಮುಂದಿನ ಉದ್ಯಾನದಲ್ಲಿ 2 ಪೆಟ್ಟಿಗೆ ಇಡಬಹುದಾಗಿದೆ. ಅಡಕೆ ಬೆಳೆ ಹೆಚ್ಚಿಸಲು ರೈತರು ನೈಸರ್ಗಿಕ ಕ್ರಮಗಳನ್ನು ಕೈಗೊಳ್ಳಬೇಕು. ತರಬೇತಿಗಾಗಿ ತೋಟಗಾರಿಕೆ ಇಲಾಖೆ ಸಹಕಾರ ನೀಡುತ್ತದೆ ಎಂದು ತಿಳಿಸಿದರು.

ಜೇನು ಕೃಷಿ ಸಂಪನ್ಮೂಲ ವ್ಯಕ್ತಿಗಳಾದ ಟಿ.ಆರ್. ಜಯಚಂದ್ರ, ಸಿ.ಎಲ್. ವಸಂತ, ಎಡಿಎ ಕೆ. ಮೋಹನಕುಮಾರ, ಕೆಎಲ್​ಇ ಕಾಲೇಜ್ ಪ್ರಾಚಾರ್ಯ ಶಿವಕುಮಾರ ಯತ್ನಳ್ಳಿ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ, ಇರ್ಫಾನ್ ಮಿಠಾಯಿಗಾರ ಮಾತನಾಡಿದರು. ಆರ್​ಎಫ್​ಒ ಶಿವರಾಜ ಮಠದ ಸ್ವಾಗತಿಸಿದರು. ಸಂತೋಷ ಸವಣೂರ ನಿರೂಪಿಸಿದರು. ಮಂಜುನಾಥ ಚವ್ಹಾಣ ವಂದಿಸಿದರು.