ಕೊಟ್ಟೂರಿನಲ್ಲಿ ಹಾಲುಮತ ಧರ್ಮ ಮತ್ತು ಪರಿಸರ ಜಾಗೃತಿ ಶ್ರಾವಣ ಯಾತ್ರೆ ಕಾರ್ಯಕ್ರಮದಲ್ಲಿ ಭಕ್ತರಿಗೆ ಕನಕ ಗುರುಪೀಠದ ಶ್ರೀ ಸಿದ್ದರಾಮಾನಂದ ಶ್ರೀಗಳು ಸಸಿ ವಿತರಿಸಿದರು. ಪ್ರಮುಖರಾದ ಶ್ರೀ ನಿಂಗಪ್ಪ ಬೀರದೇವರು, ರಮೇಶ ವಕೀಲ, ಡಾ.ಷಣ್ಮುಖಪ್ಪ, ಗಾದಿಗನೂರು ಹಾಲಪ್ಪ, ಕೆ.ಲೋಕಪ್ಪ, ಕೆಂಚಲಿಂಗಪ್ಪ ಇದ್ದರು. 
ಜಿಲ್ಲೆ

ಬೀರಪ್ಪ ದೇವರ ರಥೋತ್ಸವಕ್ಕೆ ಸಂಕಲ್ಪ

ಕೊಟ್ಟೂರು: ಹಾಲುಮತ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು, ಶಿಕ್ಷಣ, ಸಾಹಿತ್ಯ ನಿಧಿ ಸ್ಥಾಪನೆ, ಶ್ರೀಮಠದಲ್ಲಿ ನಿತ್ಯ ದಾಸೋಹಕ್ಕಾಗಿ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುವುದಾಗಿ ಕನಕ ಗುರುಪೀಠದ ತಿಂಥಿಣಿ ಬ್ರಿಡ್ಜ್‌ನ ಶ್ರೀ ಸಿದ್ದರಾಮಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ ಕನಕ ಭವನದಲ್ಲಿ ಮಂಗಳವಾರ ಹಾಲುಮತ ಧರ್ಮ ಮತ್ತು ಪರಿಸರ ಜಾಗೃತಿಯ ಶ್ರಾವಣ ಯಾತ್ರೆ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಜಿಲ್ಲೆಗಳ ಪ್ರತಿ ತಾಲೂಕಿನ ಹಾಲುಮತ ಸಮುದಾಯದವರು ನಿಗದಿಗೊಳಿಸಿದ ದಿನದಂದು ಆಗಮಿಸುವುದಾಗಿ ತಿಳಿಸಿದ ಶ್ರೀಗಳು, ತಿಂಥಿಣಿ ಬ್ರಿಡ್ಜ್‌ನಲ್ಲಿ ತೇರು ನಿರ್ಮಿಸಿ ಬೀರಪ್ಪ ದೇವರ ರಥೋತ್ಸವ ನಡೆಸುವ ಸಂಕಲ್ಪ ಮಾಡಿರುವುದಾಗಿ ಹೇಳಿದರು.

ತಿಂಥಿಣಿ ಬ್ರಿಡ್ಜ್‌ನ ಕೃಷ್ಣಾನದಿ ದಂಡೆಯಲ್ಲಿ ದೇಶದಲ್ಲೇ ಅತಿ ಬೃಹತ್ ಶಿವ, ಬೀರಲಿಂಗೇಶ್ವರ, ಮೈಲಾರಲಿಂಗೇಶ್ವರ ವಿಗ್ರಹಗಳನ್ನು ಒಳಗೊಂಡ ಮೂರ್ತಿಗಳನ್ನು ಒಂದೇ ಕಡೆ ಸ್ಥಾಪಿಸುವ ಉದ್ದೇಶವಿದೆ. ಹಾಲುಮತ ಸಮುದಾಯದ ಯುವಕರು ದುಶ್ಚಟಗಳಿಗೆ ಬಲಿಯಾಗಬಾರದು. ಶ್ರಾವಣಮಾಸ ಮುಗಿಯುವ ತನಕ ಮಾಂಸ ಸೇವನೆ ತ್ಯಜಿಸಿದರೆ ಬೀರಪ್ಪ ದೇವರಿಗೆ ಭಕ್ತಿ ಅರ್ಪಿಸಿದಂತಾಗುತ್ತದೆ ಎಂದರು.

ರಾಜ್ಯ ಕುರುಬರ ಸಂಘದ ನಿರ್ದೇಶಕ ಗಾದಿಗನೂರು ಹಾಲಪ್ಪ, ವಿಜಯನಗರ ಜಿಲ್ಲೆಯಲ್ಲಿ ಎಲ್ಲಿಯೂ ಕಾನೂನು ಕಾಲೇಜು ಇಲ್ಲ. ಶ್ರೀಗಳು ಇಲ್ಲಿ ಕಾನೂನು ಕಾಲೇಜು ಆರಂಭಿಸಬೇಕೆಂದರಲ್ಲದೆ, ತಿಂಥಿಣಿ ಬ್ರಿಡ್ಜ್ ನಡೆದು ಬಂದು ದಾರಿಯನ್ನು ಸ್ಮರಿಸಿದರು.

ಸಿಎಂ ಪದಕ ಪಡದೆ ಮುಖ್ಯ ಪೇದೆ ಸಿ.ಕೊಟ್ರೇಶ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮಾಡಲಾಯಿತು. ತಾಲೂಕು ಕುರುಬ ಸಂಘದ ಮಾಜಿ ಅಧ್ಯಕ್ಷ ಕೆ.ಕೆಂಚಲಿಂಗಪ್ಪ, ಡಾ.ಷಣ್ಮುಖಪ್ಪ, ನಾಗಪ್ಪ, ರಮೇಶ ವಕೀಲ, ರಾಂಪುರ ಶಿವಲಿಂಗಪ್ಪ, ಮೇಘಣ್ಣ. ಕೆ.ಲೋಕಪ್ಪ ಮತ್ತಿತರರಿದ್ದರು.