ಭಟ್ಕಳ: ಸೂರು ಇಲ್ಲದವರಿಗೆ ಜಾಗ ಸಮೇತ ಮನೆ, ಕಡುಬಡವ, ಅನಾಥ 50 ವಿದ್ಯಾರ್ಥಿಗಳ ದತ್ತು, 10 ದೇವಸ್ಥಾನಗಳ ಜೀಣೋದ್ಧಾರ ಮತ್ತಿತರ ಸಹಾಯ, ಸಹಕಾರ ಕುರಿತು ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಪುತ್ರಿ ಬೀನಾ ವೈದ್ಯ ಅವರ ಹುಟ್ಟುಹಬ್ಬದಂದು ಸೋಮವಾರ ಘೊಷಿಸಿದರು.
ಕಾಂಗ್ರೆಸ್ ಕಾರ್ಯಕರ್ತರು, ಬೀನಾ ವೈದ್ಯ ಅಭಿಮಾನಿಗಳ ಬಳಗ ಹಾಗೂ ಭಟ್ಕಳ, ಹೊನ್ನಾವರ ವಿಧಾನಸಭಾ ಕ್ಷೇತ್ರದ ಜನರೊಂದಿಗೆ ಪುತ್ರಿಯ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದರು.
ಈ ವೇಳೆ ಹಲವರು ತಮ್ಮ ಕಷ್ಟಗಳನ್ನು ಸಚಿವರಲ್ಲಿ ಹೇಳಿಕೊಂಡರು. ಮಂಕಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಿಡ್ನಿ ವೈಫಲ್ಯ ಕಾಯಿಲೆಯಿಂದ ಬಳಲುತ್ತಿರುವ ಸುಮಿತ್ರಾ ಅವರ ಪುತ್ರಿಯ ಡಯಾಲಿಸಿಸ್ ಚಿಕಿತ್ಸೆಗೂ ಹಣ ಸಹಾಯ ಒದಗಿಸುತ್ತಿರುವ ಸಚಿವರು, ಈಗ ಅವರಿಗೆ ಜಾಗ ಸಹಿತ ಮನೆ ನಿರ್ವಿುಸಿಕೊಡುವ ಭರವಸೆ ನೀಡಿದ್ದಾರೆ.
ಇನ್ನೊಬ್ಬ ಮಹಿಳೆ ಸರಸಾ ನಾಯ್ಕ ಸೇರಿ ಒಟ್ಟು ಐವರಿಗೆ ಜಾಗ ಸಹಿತ ಸೂರು ನಿರ್ವಣ, 50 ಅನಾಥ ಮಕ್ಕಳನ್ನು ದತ್ತು ಪಡೆದು ಅವರ ಉನ್ನತ ವಿದ್ಯಾಭ್ಯಾಸಕ್ಕೆ ಸಹಾಯಹಸ್ತ ಚಾಚುವುದು, ವಿಧಾನಸಭಾ ಕ್ಷೇತ್ರ ಸೇರಿ ಒಟ್ಟು 10 ದೇವಸ್ಥಾನಗಳ ಜೀಣೋದ್ಧಾರ, 25ಕ್ಕೂ ಅಧಿಕ ವೈದ್ಯಕೀಯ ಸಹಾಯ ಅಗತ್ಯ ಇರುವ ಬಡರೋಗಿಗಳಿಗೆ ಧನಸಹಾಯ ಮಾಡಿ ಚಿಕಿತ್ಸೆ ಪಡೆಯಲು ಮತ್ತೇನಾದರೂ ಅವಶ್ಯಕತೆ ಇದ್ದರೆ ಸಹಾಯ ಮಾಡುವುದಾಗಿಯೂ ಭರವಸೆ ನೀಡಿದರು.
ಕಾಲು ಕಳೆದುಕೊಂಡು ಪರದಾಡುತ್ತಿರುವ ತಾಲೂಕಿನ ವ್ಯಕ್ತಿಯೊಬ್ಬರಿಗೆ ಕೃತಕ ಕಾಲು ಜೋಡಣೆಗೆ ವ್ಯವಸ್ಥೆ ಕಲ್ಪಿಸಿ ಕೂಡಲೆ ಚಿಕಿತ್ಸೆ ಪಡೆಯಲು ತೆರಳುವಂತೆ ತಿಳಿಸಿದ್ದಾರೆ.
ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಮಂಕಿ ಬ್ಲಾಕ್ ಅಧ್ಯಕ್ಷ ಗೋವಿಂದ ನಾಯ್ಕ, ಕಾರ್ಯದರ್ಶಿ ಸುರೇಶ ನಾಯ್ಕ, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.