ಜಿಲ್ಲೆ

ಅಭಿವೃದ್ಧಿಗೆ ಪೂರಕ ಕಾಮಗಾರಿ ನಡೆಯಲಿ

ಬೀಳಗಿ: ಉತ್ತಮ ರಸ್ತೆ, ಕುಡಿಯುವ ನೀರು, ಸಮರ್ಪಕ ವಿದ್ಯುತ್, ಬೀಳಗಿ ತಾಲೂಕಿನ ಪ್ರತಿ ಗ್ರಾಮಗಳ ರೈತರಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾದಂತೆ ಅಭಿವೃದ್ಧಿಗೆ ಪೂರಕ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಶಾಸಕ ಮುರುಗೇಶ ನಿರಾಣಿ ಸೂಚಿಸಿದರು.

ಸ್ಥಳೀಯ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿಯೊಂದು ಇಲಾಖೆಯಲ್ಲಿ ತುರ್ತಾಗಿ ಕೈಗೊಳ್ಳಬೇಕಾದ ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸಿ, ಮಾಹಿತಿ ನೀಡಿ, ಅನುದಾನದ ಕೊರತೆ ಇದ್ದಲ್ಲಿ ಸಮಸ್ಯೆಯಾಗದಂತೆ ಅನುದಾನ ತರಲಾಗುವುದು. ಅಧಿಕಾರಿಗಳು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಬೇಕು. ಜಿಪಂ ವ್ಯಾಪ್ತಿಯ ಗ್ರಾಪಂಗಳಲ್ಲಿನ ಸಮಸ್ಯೆಗಳನ್ನು ಅಯಾ ಇಲಾಖೆ ಅಧಿಕಾರಿ ಹಾಗೂ ಗ್ರಾಮಸ್ಥರಿಂದ ಮಾಹಿತಿ ಪಡೆದು ಅಭಿವೃದ್ದಿ ಕಾಮಗಾರಿಗಳಿಗೆ ವಿಳಂಬ ಮಾಡಬೇಡಿ ಎಂದರು.

ಪ್ರತಿ ಗ್ರಾಪಂಗೆ 50 ಜನರಿಗೆ ಆಶ್ರಯ ಮನೆಗಳನ್ನು ನೀಡಲಾಗುವುದು. ಪಕ್ಷಾತೀತವಾಗಿ ಇಲ್ಲಿ ಬಡವರಿಗೆ ಮನೆಗಳು ಹಂಚಿಕೆಯಾಗಬೇಕು. ಸರ್ಕಾರಿ ಸೌಲಭ್ಯಗಳ ನೈಜ ಲಾನುಭವಿಗಳಿಗೆ ದೊರೆಯುವಂತೆ ಅಧಿಕಾರಿಗಳು ಮಾಡಬೇಕು. ಆಯಾ ಗ್ರಾಮದ ಹಿರಿಯರ ಮತ್ತು ಮುಖ್ಯಸ್ಥರ ಗಮನಕ್ಕೆ ತಂದು ಮನೆಗಳ ಆಯ್ಕೆ ಪಟ್ಟಿ ನೀಡಬೇಕು. ಬಹಳ ದಿನಗಳಿಂದ ಅರಣ್ಯ ಪ್ರದೇಶದಲ್ಲಿ ವಾಸವಾಗಿದ್ದವರಿಗೆ ಅರಣ್ಯ ಇಲಾಖೆಯವರು ತೊಂದರೆ ಕೊಡಬೇಡಿ. ಹೊಸದಾಗಿ ಆಕ್ರಮಿಸಿಕೊಂಡವರ ಮೇಲೆ ಕ್ರಮಕೈಗೊಳ್ಳಿ ಎಂದು ಅರಣ್ಯ ಇಲಾಖೆ ಅಧಿಕಾರಿ ಎಚ್.ಬಿ. ಡೋಣಿ ಅವರಿಗೆ ಸೂಚನೆ ನೀಡಿದರು.

ಸೊನ್ನ ಗ್ರಾಮದ ಸ್ಮಶಾನ ಅಭಿವೃದ್ಧಿಗೆ ಮುಂದಾಗಬೇಕೆಂದು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದರು. ಸಾಮಾಜಿಕ ವಲಯ ಅರಣ್ಯ ಇಲಾಖೆಯವರು ರುದ್ರಭೂಮಿಯಲ್ಲಿ ಸಸಿಗಳನ್ನು ನಡೆಸಬೇಕು. ಅದಕ್ಕೆ ಗ್ರಾಮಸ್ಥರು ಮತ್ತು ಗ್ರಾಪಂದವರು ಸಹಕಾರ ನೀಡುತ್ತಾರೆ ಎಂದರು.
ಹೆಸ್ಕಾಂ. ತೋಟಗಾರಿಕೆ, ಕಂದಾಯ, ಆಹಾರ, ಕೃಷಿ, ಪಂಚಾಯತ್ ರಾಜ್, ಲೋಕೋಪಯೋಗಿ, ಜಿ ಪಂ, ಶಿಕ್ಷಣ ಇಲಾಖೆ ಸೇರಿದಂತೆ ಇನ್ನೂ ಹಲವಾರು ಇಲಾಖೆಗಳ ಮಾಹಿತಿ ಪಡೆದರು.

ತಹಸೀಲ್ದಾರ್ ಭೀಮಪ್ಪ ಅಜೂರ, ತಾಪಂ ಇಒ ಎಂ.ಕೆ. ತೊದಲಬಾಗಿ, ಸಿಪಿಐ ಸಂಜೀವ ಬಳಿಗಾರ ಸೇರಿದಂತೆ ಮತ್ತಿತರರು ಇದ್ದರು.

50 ಲಕ್ಷ ರೂ. ಅನುದಾನ
ಸಮಾಜ ಕಲ್ಯಾಣ ಹಾಗೂ ಬಿಸಿಎಂ ಇಲಾಖೆ ವ್ಯಾಪ್ತಿಯಲ್ಲಿ ಬರುವ ಕಾಲೇಜು, ವಸತಿನಿಲಯ ಪ್ರಾರಂಭವಾಗಿದ್ದರೂ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಮುಂದೆ ಬರುತ್ತಿಲ್ಲ. ಸ್ವಂತ ಕಟ್ಟಡಕ್ಕೆ ಜಾಗಬೇಕು. ಅಲ್ಲದೆ, ಪಟ್ಟಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ 50 ಲಕ್ಷ ರೂ. ಅನುದಾನಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಚ್.ಎಂ. ಕಟ್ಟಿಮನಿ ಹೇಳುತ್ತಿದ್ದಂತೆ, ಶಾಸಕರು 50 ಲಕ್ಷ ರೂ. ಅನುದಾನ ದೊರಕಿಸುವ ಭರವಸೆ ನೀಡಿದರು.

EndFragment