ಬೈಲುಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ರೋಟರಿ ಮಿಡ್ ಟೌನ್, ಅರಣ್ಯ ಇಲಾಖೆ, ಹಾಗೂ ಅವರ್ತಿ ರಾಜೇಶ್ವರಿ ವಿದ್ಯಾ ಸಂಸ್ಥೆ ಸಂಯುಕ್ತವಾಗಿ ಶಾಲಾ ಮಕ್ಕಳ ಸಹಯೋಗದಲ್ಲಿ ನಮ್ಮ ನಡೆ ಪರಿಸರ ಸಂರಕ್ಷಣೆ ಕಡೆಗೆ ಎಂಬ ಘೋಷಣೆ ಯೊಂದಿಗೆ ದೊಡ್ಡ ಹೊನ್ನೂರು ಗ್ರಾಮದಿಂದ ಚಿಕ್ಕ ಹೊನ್ನೂರಪ್ಪನ ಬೆಟ್ಟಕ್ಕೆ ತೆರಳಿ ಬಿದಿರು ಬೀಜದ ಉಂಡೆಗಳನ್ನು ಬಿತ್ತನೆ ಮಾಡಿದರು.
ಬೆಟ್ಟದ ಸಮೀಪದಲ್ಲಿರುವ ಸಮುದಾಯ ಭವನದ ಆವರಣದಲ್ಲಿ ಶುಕ್ರವಾರ ಅಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಜಿ ಕೆ ಜಗನ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇರುವ ಅರಣ್ಯಗಳು ಹೆಮ್ಮರವಾಗಿ ಬೆಳೆದರೆ ಅಂತರ್ಜಲ ವೃದ್ಧಿ ಯಾಗಲಿದೆ ಎಂದರು. ವನ್ಯಜೀವಿಗಳಿಗೆ ಅಗತ್ಯವಾದ ನೀರು ಮತ್ತು ಆಹಾರ ಸಿಕ್ಕರೆ ಕಾಡಿನ ಒಳಗೇ ಇರುತ್ತವೆ. ರೈತರ ಬೆಳೆಗಳು ಉಳಿಯಲಿವೆ. ಇದರಿಂದ ಕೃಷಿಕರ ಬದುಕು ಅಭಿವೃದ್ಧಿ ಹೊಂದಲಿದೆ ಎಂದರು.
ರೋಟರಿ ವಲಯ 6ರ ಪ್ರಾಂತಪಾಲ ತಿರುಮಲಪುರದ ರಾಜೇಗೌಡ. ಮಾತನಾಡಿ, ಮನುಷ್ಯರಿಗೆ ಹುಟ್ಟಿನಿಂದ ಕೊನೆತನಕ ಬೇಕಾಗಿರುವುದು ಬಿದುರು ಇದನ್ನು ಬೆಳೆದು ರಕ್ಷಿಸುವುದ ನಮ್ಮಗಳ ಹೊಣೆ ಎಂದರು. ಕಾಡನ್ನು ರಕ್ಷಿಸುವುದು ಕೇವಲ ಅರಣ್ಯ ಇಲಾಖೆಯವರ ಜವಾಬ್ದಾರಿ ಎಂದು ಭಾವಿಸಬಾರದು. ಇದು ಪ್ರತಿಯೊಬ್ಬ ಪ್ರಜೆಗಳ ಕರ್ತವ್ಯ ಎಂದರು.
ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು ಸಂರಕ್ಷಿಸಿದರೆ ಊರೇ ಒಂದು ವನವಾಗಲಿದೆಎಂದರು. ವಿದ್ಯಾರ್ಥಿಗಳಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ರೋಟರಿ ಮಿಡ್ ಟೌನ್ ಪ್ರಧಾನ ಕಾರ್ಯದರ್ಶಿ ಚೇತನ್, ಖಜಾಂಚಿ ಐ. ಕೆ. ಪಿ. ಹೆಗ್ಗಡೆ, ಸದಸ್ಯರಾದ ಬಸವೇಗೌಡ, ಹರೀಶ್, ಕೃಷ್ಣ, ಅರಣ್ಯ ಸಿಬ್ಬಂದಿ ಶಶಿಕುಮಾರ್, ಆನಂದ್, ಮುನಿಯ. ಉಮಾಶಂಕರ, ಶಿಕ್ಷಕರಾದ ಗುರುದತ್, ಸೌಜನ್ಯಾ ರಾಣಿ, ಹನುಮೇಶ ಇತರರು ಇದ್ದರು.