ಜಿಲ್ಲೆ

ಮಾಲಕರಿಂದ ಬೀಡಿ ಕಾರ್ಮಿಕರಿಗೆ ವಂಚನೆ : ಸಿಪಿಎಂ ಮುಖಂಡ ಮುನೀರ್ ಕಾಟಿಪಳ್ಳ ಆರೋಪ

ಗುರುಪುರ: ರಾಜ್ಯ ಸರ್ಕಾರ 2018ರಲ್ಲೇ ಬೀಡಿ ಕಾರ್ಮಿಕರಿಗೆ 210 ರೂ. ಕನಿಷ್ಠ ಕೂಲಿ ಘೋಷಿಸಿದ್ದು, ಆದರೆ ಮಾಲೀಕರು ಕೂಲಿ ನೀಡದೆ ಲಕ್ಷಾಂತರ ಕಾರ್ಮಿಕರನ್ನು ವಂಚಿಸುತ್ತಿದ್ದಾರೆ. ಬೀಡಿ ಕಾರ್ಮಿಕರು ತಮ್ಮ ಹಕ್ಕಿಗಾಗಿ ಧ್ವನಿ ಎತ್ತುವ ಸಂದರ್ಭ ಬಂದಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮನೀರ್ ಕಾಟಿಪಳ್ಳ ಹೇಳಿದರು.

ಎಡಪದವಿನ ನಾರಾಯಣಗುರು ಸಭಾಭವನದಲ್ಲಿ ಇತ್ತೀಚೆಗೆ ಜರುಗಿದ ಕುಪ್ಪೆಪದವು ಪ್ರದೇಶ ಬೀಡಿ ಕಾರ್ಮಿಕರ ಸಂಘದ 35ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.

ಸಭೆ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಬೀಡಿ ಫೆಡರೇಶನ್ ಕಾರ್ಯದರ್ಶಿ ಜೆ. ಬಾಲಕೃಷ್ಣ ಶೆಟ್ಟಿ, ಅ.7ರಿಂದ ಬೀಡಿ ಕಾರ್ಮಿಕರ ಅನಿರ್ದಿಷ್ಟಾವಧಿ ಹೋರಾಟ ನಡೆಯಲಿದೆ. ಗುರುಪುರ ಕೈಕಂಬದಲ್ಲಿರುವ ಟೆಲಿಫೋನ್ ಬೀಡಿ ಕಂಪನಿಯಲ್ಲಿ ಅ.9ರಂದು ಪ್ರತಿಭಟನೆ ಆಯೋಜಿಸಲಾಗಿದೆ ಎಂದರು.

ಬೀಡಿ ಕಾರ್ಮಿಕರಿಗೆ ಕನಿಷ್ಠ ಪಿಂಚಣಿ 3000 ರೂ. ನೀಡಬೇಕು. ಎಡಪದವು, ಕುಪ್ಪೆಪದವು, ಇರುವೈಲು ಮಧ್ಯೆ ಸರ್ಕಾರಿ ಬಸ್ ಒದಗಿಸಬೇಕು ಎಂದು ಕಾರ್ಮಿಕರು ಒತ್ತಾಯಿಸಿದ್ದು, ಸಭೆಯಲ್ಲಿ ಈ ಕುರಿತು ನಿರ್ಣಯಿಸಲಾಯಿತು.

21 ಸದಸ್ಯರು ಒಳಗೊಂಡ ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಭವಾನಿ, ಕೋಶಾಧಿಕಾರಿಯಾಗಿ ಕುಸುಮಾ ಆಯ್ಕೆಯಾದರು. ಸಂಘದ ಅಧ್ಯಕ್ಷೆ ಭವಾನಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವಸಂತಿ ವಂದಿಸಿದರು.