ಜಿಲ್ಲೆ

ಜೇನು ವಿಷಕ್ಕೂ ಭಾರಿ ಡಿಮಾಂಡ್!

ಭರತ್‌ರಾಜ್ ಸೊರಕೆ ಮಂಗಳೂರು

ಕರಾವಳಿ ಕರ್ನಾಟಕದಲ್ಲಿ ಜೇನುತುಪ್ಪ ಸಂಗ್ರಹಿಸುವ ಕೃಷಿಕರು ಬಹಳಷ್ಟಿದ್ದರೂ ಉಪಉತ್ಪನ್ನವಾದ ಜೇನು ವಿಷ ಸಂಗ್ರಹಿಸುವವರಿಲ್ಲ. ಕಿನ್ನಿಗೋಳಿಯ ಡಿಸ್ಕ್ ಜಾಕಿ ಪ್ರಜ್ವಲ್ ಶೆಟ್ಟಿಗಾರ್ ಎಂಬುವರು ಜೇನು ವಿಷ (ಬೀ ವೆನಮ್) ಪಡೆಯುವ ಯಂತ್ರವನ್ನು ಸ್ವತಃ ತಯಾರಿಸಿ ವಿಷ ಸಂಗ್ರಹಿಸುವಲ್ಲಿ ಯಶಸ್ಸು ಸಾಧಿಸಿದ್ದಾರೆ.

ವರ್ಷದ ಹಿಂದೆ ಪರ್ಯಾಯ ಉದ್ಯೋಗದ ಹುಡುಕಾಟದಲ್ಲಿ ಪ್ರಜ್ವಲ್‌ಗೆ ಕಂಡಿದ್ದು ಜೇನು ಕೃಷಿ. ಕೇವಲ ಜೇನು ತುಪ್ಪ ತೆಗೆಯುವ ಬದಲು ಜೇನು ವಿಷ ಸಂಗ್ರಹಿಸುವ ಸಾಹಸಕ್ಕೆ ಕೈ ಹಾಕಿದರು. ವಿಷ ಸಂಗ್ರಹದ ಪ್ಲೇಟ್‌ಗೆ ಮಾರುಕಟ್ಟೆಯಲ್ಲಿ ಹತ್ತಿಪ್ಪತ್ತು ಸಾವಿರ ಬೆಲೆ ಇದೆ. ಮತ್ತು ಇವುಗಳು ಮೆಲ್ಲಿಫೆರಾ ತಳಿಗೆ ಮಾತ್ರ ಆಗುವಂಥದ್ದು. ಆದರೆ ಕರಾವಳಿ, ಮಲೆನಾಡಿನಲ್ಲಿ ಅಧಿಕ ಪ್ರಮಾಣದಲ್ಲಿರುವುದು ಸೆರೆನಾ ತಳಿ. ಹೀಗಾಗಿ ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಸ್ವಂತ ಪ್ರಯೋಗಕ್ಕೆ ತೊಡಗಿದರು.

ಇವರ ಸಾಹಸದಲ್ಲಿ ನೆರವಾದವರು ಮಂಗಳೂರಿನ ಸಹಾಯಕ ತೋಟಗಾರಿಕೆ ಅಧಿಕಾರಿ ಯುಗೇಂದ್ರ, ಜೇನು ಅನುವುಗಾರ ಪ್ರವೀಣ್, ಜೇನುಕೃಷಿಕರಾದ ನವೀನ್ ಮಂಗಳೂರು, ಸುಳ್ಯ ಪಡ್ಪು ಫಾರ್ಮ್ಸ್‌ನ ವಿವೇಕ್, ಲಿಖಿತ್ ಕೊಡ್ತುಗುಳಿ. ಅಶೋಕ್ ಶೆಟ್ಟಿಗಾರ್ ಕುಳಾಯಿ ತಾಂತ್ರಿಕ ಮಾರ್ಗದರ್ಶನ ನೀಡಿದ್ದಾರೆ.

ಪ್ರಜ್ವಲ್ ಕಳೆದೊಂದು ತಿಂಗಳಿನಿಂದ ವಿವಿಧ ಪ್ರದೇಶದಲ್ಲಿ ವಿಷ ಸಂಗ್ರಹ, ನೊಣಗಳ ಚಟುವಟಿಕೆ, ಫ್ರಿಜ್‌ನಲ್ಲಿ ಕಾಪಾಡುವ ಅಧ್ಯಯನ ಮಾಡಿ ಪರಿಪೂರ್ಣ ಯಶಸ್ಸು ಸಾಧಿಸಿದ್ದಾರೆ. ಸದ್ಯ 5 ರೀತಿಯ ಬೀ ವೆನಮ್ ಎಕ್ಸ್‌ಟ್ರಾೃಕ್ಟರ್ ನಿರ್ಮಿಸಿದ್ದಾರೆ.

ಮನುಷ್ಯನ ಚರ್ಮದ ಮೇಲೆ ಚುಚ್ಚಿದ ಜೇನುನೊಣಗಳ ಮುಳ್ಳು ಚರ್ಮದ ಒಳಗಡೆ ಉಳಿದುಕೊಂಡು ನೊಣಕ್ಕೆ ಘಾಸಿಯಾಗಿ ಸಾವನ್ನಪ್ಪುತ್ತದೆ. ಆದರೆ ಯಂತ್ರದಲ್ಲಿ ನೊಣಗಳು ಸಾಯುವುದಿಲ್ಲ. ಮನುಷ್ಯನಲ್ಲಿ ರಕ್ತ ಉತ್ಪತ್ತಿಯಾಗುವಂತೆ ಜೇನು ನೊಣದಲ್ಲಿ ವಿಷ ಉತ್ಪತ್ತಿಯಾಗುತ್ತದೆ. ಬ್ರೂಡ್‌ನ ನೊಣಗಳ ಸಂಖ್ಯೆ ನೋಡಿಕೊಂಡು ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ಅರ್ಧ ಗಂಟೆ ಗೂಡಿನ ಬಳಿ ಬೀ ವೆನಮ್ ಎಕ್ಸ್‌ಟ್ರಾಕ್ಟರ್ ಇಡಬಹುದು.

ಔಷಧಕ್ಕೆ ಬಳಕೆ:  ಬೀ ವೆನಮ್ ಔಷಧಕ್ಕೆ ಬಳಕೆಯಾಗುತ್ತದೆ. ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೇಡಿಕೆ ಇದೆ. ಬೃಹತ್ ಔಷಧ ಕಂಪನಿಗಳು ದೊಡ್ಡ ಮೊತ್ತ ನೀಡಿ ಖರೀದಿಸುತ್ತ್ತವೆ. ಪುಣೆ, ದೆಹಲಿ, ಮಹಾರಾಷ್ಟ್ರದಲ್ಲಿ ವಿಷ ಸಂಗ್ರಹ ನಡೆಯುತ್ತಿದೆ. ಕರ್ನಾಟಕದಲ್ಲಿ ರೈತರಿಗೆ ಅಷ್ಟೊಂದು ಮಾಹಿತಿ ಇಲ್ಲ.

ಸಂಗ್ರಹ ಹೇಗೆ?: ಜೇನುಪೆಟ್ಟಿಗೆಯ ಮುಂಭಾಗ ನೊಣಗಳ ಓಡಾಟ ದ್ವಾರದಲ್ಲಿ ವಿಷ ಸಂಗ್ರಹಿಸುವ ಪ್ಲೇಟ್ ಇಟ್ಟು ಬ್ಯಾಟರಿ ಮೂಲಕ ಸಣ್ಣ ವೋಲ್ಟೇಜ್‌ನಲ್ಲಿ ವಿದ್ಯುತ್ ಪ್ರವಹಿಸಲಾಗುತ್ತದೆ. ನೊಣಗಳು ಪ್ಲೇಟ್ ಮೇಲೆ ಕೂತಾಗ ವೈಬ್ರೇಶನ್‌ಗೊಳಗಾಗಿ ವಿಷ ಕೊಂಡಿಯಿಂದ ಗಾಜಿನ ಪ್ಲೇಟ್ ಮೇಲೆ ಕುಟುಕುತ್ತವೆ. ಆ ವೇಳೆ ವಿಷ ಗಾಜಿನ ಮೇಲೆ ಸಂಗ್ರಹವಾಗುತ್ತದೆ.

ಬ್ರೂಡ್‌ನಲ್ಲಿ ನೊಣಗಳು ಉತ್ತಮವಾಗಿದ್ದಾಗ ಮಾತ್ರ ಜೇನು ವಿಷ ಸಂಗ್ರಹಿಸಲಾಗುತ್ತದೆ. ಇದರಿಂದ ಅವುಗಳ ಚಟುವಟಿಕೆಯಲ್ಲಿ ಯಾವುದೇ ಬದಲಾವಣೆಗಳಾಗದು. ವಿಷವನ್ನು ಫ್ರೀಜ್ ಮಾಡಿ ಸಂಗ್ರಹಿಸಿಡುವುದು ದೊಡ್ಡ ಸವಾಲು. ಸ್ವಲ್ಪ ವ್ಯತ್ಯಾಸವಾದರೂ ಗುಣಮಟ್ಟ ಹಾಳಾಗುತ್ತದೆ.

- ಪ್ರಜ್ವಲ್ ಶೆಟ್ಟಿಗಾರ್, ಕಿನ್ನಿಗೋಳಿ