* ಇಬ್ಬರು ಚೇತರಿಕೆ
ಬೇಲೂರು : ಜಮೀನಿನಲ್ಲಿ ಜೆಸಿಬಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಜೇನುಗಳ ದಾಳಿಗೆ ಸಿಲುಕಿ ಜೆಸಿಬಿ ಆಪರೇಟರ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಕಂದಾವರ ಗ್ರಾಮದಲ್ಲಿ ಶನಿವಾರ ನಡೆದಿದೆ.
ನಿಡಗೋಡು ಗ್ರಾಮದ ಜೆಸಿಬಿ ಆಪರೇಟರ್ ಚಲುವರಾಜು (51) ಮೃತ. ಇವರು ಕಂದಾವರ ಗ್ರಾಮದ ಸತೀಶ್ ಎಂಬುವವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭ ಜೇನುಗಳು ಏಕಾಏಕಿ ಮೂವರನ್ನು ಕಚ್ಚಿವೆ. ಜಮೀನಿನಲ್ಲಿದ್ದ ಇಬ್ಬರು ತಕ್ಷಣವೇ ಸ್ಥಳದಿಂದ ಓಡಿಹೋಗಿದ್ದಾರೆ. ಆದರೆ ಜೆಸಿಬಿ ಯಂತ್ರದೊಳಗಿದ್ದ ಚಲುವರಾಜು, ಕಿಟಕಿಗಳನ್ನು ಹಾಕಿಕೊಂಡು
ಕುಳಿತರು. ಸಾವಿರಾರು ಜೇನುಗಳು ಒಳನುಗ್ಗಿ ಕಡಿದ ಪರಿಣಾಮ ಅವರು ಸ್ಥಳದಲ್ಲೇ ಕುಸಿದು ಬಿದ್ದು ಮೃತರಾದರು. ಉಳಿದ ಇಬ್ಬರಿಗೆ ಬೇಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಚೇತರಿಸಿ ಕೊಂಡಿದ್ದಾರೆ. ಮೃತ ಚಲುವರಾಜುಗೆ ಪತ್ನಿ ಹಾಗೂ ಇಬ್ಬರೂ ಗಂಡು ಮಕ್ಕಳಿದ್ದಾರೆ. ಘಟನೆ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಭಾನುವಾರ ಅಂತ್ಯಕ್ರಿಯೆ ನಡೆಸಲಾಗಿದೆ.