ಕಾರವಾರ/ಶಿರಸಿ/ಯಲ್ಲಾಪುರ: ಮತ್ತೆ ಬೇಡ್ತಿ-ವರದಾ ನದಿ ಜೋಡಣೆ ವಿಚಾರ ಮುನ್ನೆಲೆಗೆ ಬಂದಿದೆ. ಮಾಜಿ ಸಿಎಂ ಹಾಗೂ ಹಾಲೀ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಈ ಕುರಿತು ಶನಿವಾರ ಹಾವೇರಿಯಲ್ಲಿ ಮಾತನಾಡಿದ್ದು, `ಬೇಡ್ತಿ-ವರದಾ ನದಿ ಜೋಡಣೆ ಆಗಿಯೇ ಆಗುತ್ತದೆ' ಎಂದು ಘೋಷಿಸಿದ್ದಾರೆ.
2017 ರಲ್ಲಿ ನಾನು ಸಿಎಂ ಆಗಿದ್ದಾಗ ಈ ಬಗ್ಗೆ ಡಿಪಿಆರ್ ತಯಾರಿಕೆಗೆ ಆದೇಶಿಸಿದ್ದೆ. 2022 ರಲ್ಲಿ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (ಎನ್‌ಡಬ್ಲುಡಿಎ) ಬೆಂಗಳೂರು ಪ್ರಾದೇಶಿಕ ಕಚೇರಿ ತಯಾರಿಸಿದ ವಿಸ್ತçತ ಯೋಜನಾ ವರದಿಯನ್ನು ನವದೆಹಲಿಯ ಕೇಂದ್ರ ಕಚೇರಿಗೆ ಕಳಿಸಿದ್ದು, ಶೀಘ್ರ ಅನುಮೋದನೆ ನೀಡುವಂತೆ ಅಽಕಾರಿಗಳಿಗೆ ಒತ್ತಾಯಿಸಿದ್ದೇನೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಕಿತ್ತೂರು ಭಾಗದ ಮೂರ್ನಾಲ್ಕು ಜಿಲ್ಲೆಗಳ ಜನರಿಗೆ ಇದು ಸಂತಸದ ವಿಷಯವಾದರೆ, ಅದೇ ಭಾಗದ ಉತ್ತರ ಕನ್ನಡ ಜಿಲ್ಲೆಯ ಬೇಡ್ತಿ ಕಣಿವೆಯಲ್ಲಿ ಕಳವಳವನ್ನು ಹುಟ್ಟು ಹಾಕಿದೆ.
ಡಿಪಿಆರ್‌ನಲ್ಲೇನಿದೆ..?
ಎನ್‌ಡಬ್ಲುಡಿಎ 2022 ರಲ್ಲಿ ಡಿಪಿಆರ್ ಸಿದ್ಧಪಡಿಸಿದೆ. ಒಟ್ಟು 2817 .62 ಕೋಟಿ ರೂ.ಗಳ ಯೋಜನೆ ಇದಾಗಿದ್ದು, ಶಿರಸಿ ತಾಲೂಕಿನ ಪಟ್ಟಣದ ಹೊಳೆ ಹಾಗೂ ಶಾಲ್ಮಲಾ ನದಿ ನೀರನ್ನು ವರದಾ ನದಿಗೆ ಸೇರಿಸುವುದು ಒಂದು ಭಾಗವಾದರೆ ಬೇಡ್ತಿ ನದಿಯ ನೀರನ್ನು ಧರ್ಮಾ ನದಿಗೆ ಸೇರಿಸುವುದು ಇನ್ನೊಂದು ಭಾಗ. ಒಟ್ಟು 18.50 ಟಿಎಂಸಿ ನೀರನ್ನು ಉತ್ತರ ಕರ್ನಾಟಕ ಭಾಗಕ್ಕೆ ತಿರುಗಿಸುವ ಯೋಜನೆ ಇದಾಗಿದೆ.
ಪಟ್ಟಣದ ಹಳ್ಳಕ್ಕೆ ಶಿರಲಬೈಲ್ ಎಂಬಲ್ಲಿ 145 ಮೀಟರ್ ಉದ್ದದ ಒಡ್ಡು ನಿರ್ಮಾಣ ಮಾಡಿ ಅಲ್ಲಿಂದ 0.10 ಕಿಮೀ ಕಾಲುವೆ, 6.5 ಕಿಮೀ ಸುರಂಗ ಮಾಡಿ ನೀರನ್ನು ಶಾಲ್ಮಲಾ ಹಳ್ಳಕ್ಕೆ ಸೇರಿಸಲಾಗುತ್ತದೆ. ಶಾಲ್ಮಲಾ ನದಿಯಲ್ಲಿ ಹುಳಗೋಳ ಸಮೀಪ 202 ಮೀಟರ್ ಒಡ್ಡು ನಿರ್ಮಾಣ ಮಾಡಿ, 10.67 ಟಿಎಂಸಿ ನೀರನ್ನು ಪಂಪ್ ಮಾಡಲಾಗುತ್ತದೆ. ನಂತರ 6.7 ಕಿಮೀ ಸುರಂಗ ಹಾಗೂ 1.73 ಕಿಮೀ ಚಾನಲ್ ಮೂಲಕ ನೀರನ್ನು ವರದಾ ನದಿಗೆ ಸೇರಿಸಲಾಗುತ್ತದೆ.
ಬೇಡ್ತಿ ನದಿಗೆ ಯಲ್ಲಾಪುರ ತಾಲೂಕಿನ ಸೂರಿಮನೆ ಎಂಬಲ್ಲಿ 165 ಮೀಟರ್ ಒಡ್ಡು ನಿರ್ಮಾಣ ಮಾಡಿ ಅಲ್ಲಿಂದ 7.84 ಟಿಎಂಸಿ ನೀರನ್ನು ಎರಡು ಹಂತದಲ್ಲಿ ಪಂಪ್ ಮಾಡಿ 4.23 ಕಿಮೀ ಸುರಂಗದ ಮೂಲಕ ಧರ್ಮಾ ನದಿಗೆ ಸೇರಿಸಲಾಗುತ್ತದೆ. ನಿರ್ಮಾಣ ಕಾಮಗಾರಿಗಳಿಗಾಗಿ 234 ಹೆಕ್ಟೇರ್ ಅರಣ್ಯ ಹಾಗೂ 5 ಹೆಕ್ಟೇರ್ ಖಾಸಗಿ ಭೂಮಿ. ನೀರು ಸಾಗಣೆಗಾಗಿ 111 ಹೆಕ್ಟೇರ್ ಅರಣ್ಯ ಹಾಗೂ 20 ಹೆಕ್ಟೇರ್ ಖಾಸಗಿ ಭೂಮಿ ಬೇಕು ಎಂದು ಅಂದಾಜಿಸಲಾಗಿದೆ. ಯೋಜನೆಯಿಂದ ಕಿತ್ತೂರು ಕರ್ನಾಟಕದ ಜಿಲ್ಲೆಗಳ ಒಟ್ಟು 1,04,900 ಹೆಕ್ಟೇರ್ ಕೃಷಿಗೆ ಅನುಕೂಲವಾಗಲಿದೆ ಎಂದು ತಿಳಿಸಲಾಗಿದೆ.
ಉತ್ತರ ಕನ್ನಡಿಗರ ಪ್ರಶ್ನೆಗಳು..?
ಕಡಲ ಜೀವ ಶಾಸ್ತ್ರಜ್ಞ
ಡಾ.ವಿ.ಎನ್.ನಾಯಕ
ಬೇಡ್ತಿ ಹಾಗೂ ಅದರ ಉಪ ನದಿಗಳಗುಂಟ ಓಡಾಡಿದ್ದೇನೆ. ಬೇಡ್ತಿ ವರದಾ ನದಿ ಜೋಡಣೆಗಾಗಿ ಈ ಹಿಂದೆ ಶಿರಸಿ, ಸೋಂದಾ, ಬೆಂಗಳೂರಿನಲ್ಲಿ ನಡೆದ ಸಭೆಗಳಲ್ಲೂ ಪಾಲ್ಗೊಂಡಿದ್ದೆ. ಈ ಹಿಂದೆ ಡಿಪಿಆರ್ ಅಧ್ಯಯನ ಮಾಡಿ, ಅದಕ್ಕೆ ಆ ಸಂಬಂಧ ಲೇಖನವನ್ನೂ ಬರೆದಿದ್ದೆ. ಆಗ ನಿಂತ ಯೋಜನೆ ಮತ್ತೆ ಚಿಗುರೊಡೆದಿದ್ದು ಬೇಸರದ ಸಂಗತಿ. ಬೇÃಡ್ತಿ-ವರದಾ ನದಿ ಜೋಡಣೆ ಸಾಧುವಲ್ಲ. ಇದರಿಂದ ಕೇವಲ ಮಲೆನಾಡು ಮಾತ್ರವಲ್ಲ ಕರಾವಳಿಯ ಜನಜೀವನ, ಆರ್ಥಿಕತೆಯ ಮೇಲೂ ದೊಡ್ಡ ಹೊಡೆತ ನೀಡಲಿದೆ. ಬೇಡ್ತಿ ನದಿಗೆ ಕರಾವಳಿಯಲ್ಲಿ ಗಂಗಾವಳಿ ಎಂದು ಕರೆಯುತ್ತಾರೆ. ನದಿ ಜೋಡಣೆಯಿಂದ ಗಂಗಾವಳಿ ನದಿಗೆ ನೀರಿನ ಹರಿವು ಕಡಿಮೆಯಾಗಲಿದೆ. ಇದರಿಂದ ಕರಾವಳಿಯಲ್ಲಿ ನೀಡಿನ ಕೊರತೆ ಉಂಟಾಗಬಹುದು. ಅಂತರ್ಜಲ ಮಟ್ಟ ಕಡಿಮೆಯಾಗಿ ಕರಾವಳಿಯ ಕೃಷಿಗೆ ಸಮಸ್ಯೆಯಾಗಬಹುದು. ನೀರಿನ ಹರಿವಿನ ರಭಸ ಕಡಿಮೆಯಾಗುವುದರಿಂದ ಉಪ್ಪು ನೀರಿನ ಪ್ರಭಾವ ಇನ್ನಷ್ಟು ದೂರ ಹೋಗಬಹುದು. ಇದರಿಂದ ಕರಾವಳಿಯ ಕೃಷಿ ಹಾಗೂ ಕುಡಿಯುವ ನೀರಿಗೂ ಸಮಸ್ಯೆಯಾಗಬಹುದು. ಮಾತ್ರವಲ್ಲ. ಅಣೆಕಟ್ಟೆ ನಿರ್ಮಾಣದಿಂದ ಸಮುದ್ರ ಹಾಗೂ ನದಿಯ ಮತ್ಸ÷್ಯ ಸಂಪತ್ತಿಗೆ ನ್ಯೂಟ್ರೀಶನ್ ಕೊರತೆ ಉಂಟಾಗಿ ಅವುಗಳು ನಶಿಸಬಹುದು. ಗಂಗಾವಳಿ ನದಿಯ ಮತ್ಸ÷್ಯ ಸಂಪತ್ತನ್ನು ನಂಬಿ ಜೀವನ ನಡೆಸುತ್ತಿರುವ ಸಾವಿರಾರು ಕುಟುಂಬಗಳಿಗೂ ಸಮಸ್ಯೆಯಾಗಬಹುದು.
ಯೋಜನೆ ಸಾಧುವಲ್ಲ
ಸಂಸದ, ಉತ್ತರ ಕನ್ನಡ
ವಿಶ್ವೇಶ್ವರ ಹೆಗಡೆ ಕಾಗೇರಿ
ಯೋಜನೆಗಳ ಜಾರಿ, ಸಾಧಕ ಬಾಧಕಗಳ ಕುರಿತಂತೆ ಜಿಲ್ಲೆಯ ಧಾರಣಾ ಸಾಮರ್ಥ್ಯದ ಅಧ್ಯಯನ ಆಗಬೇಕು ಎಂಬುದನ್ನು ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ. ಜಿಲ್ಲೆಯ ಪರಿಸರ ವ್ಯವಸ್ಥೆಗೆ ಯಾವುದೇ ಧಕ್ಕೆ ಆಗಬಾರದು. ಈ ಕುರಿತಂತೆ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತನಾಡಲಿದ್ದೇನೆ.
ಜಿಲ್ಲೆಯ ಪರಿಸರ ವ್ಯವಸ್ಥೆಗೆ ಧಕ್ಕೆ ಬರಬಾರದು
ಪ.ಪಂ ಸದಸ್ಯ
ಸತೀಶ ನಾಯ್ಕ,ಯಲ್ಲಾಪುರ
ಬೇಡ್ತಿ-ವರದಾ ನದಿ ಜೋಡಣೆಯ ಯೋಜನೆ ನಿರರ್ಥಕವಾಗಲಿದೆ. ನದಿಯ ಸ್ಥಿತಿಗತಿಗಳ ಬಗ್ಗೆ ಸರಿಯಾದ ಅಧ್ಯಯನ ಮಾಡದೇ ಈ ಯೋಜನೆ ಜಾರಿಗೆ ತಂದರೆ ಕೋಟಿ ಕೋಟಿ ಹಣ ವ್ಯರ್ಥವಾಗುವುದು ಬಿಟ್ಟರೆ ಯಾವ ಪ್ರಯೋಜನವೂ ಇಲ್ಲ. ಇದಕ್ಕೆ ನಮ್ಮಲ್ಲಿಯೇ ನಿದರ್ಶನವಿದೆ. ಬೇಡ್ತಿ ನದಿಯಿಂದ ಯಲ್ಲಾಪುರ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಯೋಜನೆಯ ವೈಫಲ್ಯಕ್ಕೆ ನದಿಯಲ್ಲಿ ನೀರಿನ ಕೊರತೆಯಾದದ್ದೂ ಪ್ರಮುಖ ಕಾರಣ. ವಿವೇಚನೆ ಇಲ್ಲದೇ ಯೋಜನೆ ಕೈಗೆತ್ತಿಕೊಳ್ಳುವುದಕ್ಕೆ ನಮ್ಮ ವಿರೋಧವಿದೆ.
ಯಲ್ಲಾಪುರಕ್ಕೇ ನೀರು ಸಾಲ್ತಿಲ್ಲ