ಜಿಲ್ಲೆ

ಬಿಡದಿ ಪುರಸಭೆ ಜೆಡಿಎಸ್ ತೆಕ್ಕೆಗೆ : ಸರಸ್ವತಿ ಅಧ್ಯಕ್ಷೆ, ಲೋಕೇಶ್ ಉಪಾಧ್ಯಕ್ಷ

ಬಿಡದಿ: ತೀವ್ರ ಕುತೂಹಲ ಮೂಡಿಸಿದ್ದ ಬಿಡದಿ ಪುರಸಭೆ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಗಾದಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಎ.ಸಿ. ಸರಸ್ವತಿ ರಮೇಶ್ ಅಧ್ಯಕ್ಷೆಯಾಗಿ, ಸಿ.ಲೋಕೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಸರಸ್ವತಿ ರಮೇಶ್ ಮತ್ತು ಕಾಂಗ್ರೆಸ್​ನ ಚಂದ್ರಕಲಾ ನಾಗೇಶ್ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್​ನ ಸಿ.ಲೋಕೇಶ್ ಮತ್ತು ಕಾಂಗ್ರೆಸ್​ನ ಬಿ.ಆರ್.ಮಹಿಪತಿ ನಾಮಪತ್ರ ಸಲ್ಲಿಸಿದ್ದರು. ಸರಸ್ವತಿ ಮತ್ತು ಸಿ.ಲೋಕೇಶ್ ತಲಾ 16 ಮತಗಳನ್ನು ಪಡೆದರು. ಚಂದ್ರಕಲಾ ಮತ್ತು ಮಹಿಪತಿ ತಲಾ 9 ಮತಗಳನ್ನು ಪಡೆದು ಸೋಲು ಕಂಡರು. ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ನರಸಿಂಹಮೂರ್ತಿ ಇಬ್ಬರ ಆಯ್ಕೆ ಘೋಷಿಸಿದರು.

ಪುರಸಭೆ ಮುಖ್ಯಾಧಿಕಾರಿ ಆರ್.ರಮೇಶ್ ,ಮಾಗಡಿ ಶಾಸಕ ಎ.ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಮತ್ತು 23 ಪುರಸಭೆ ಸದಸ್ಯರು ಭಾಗವಹಿಸಿದ್ದರು. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು ಜೆಡಿಎಸ್ ಪಾಲಾಗುತ್ತಿದ್ದಂತೆ ಮುಖಂಡರು, ಕಾರ್ಯಕರ್ತರು ಘೊಷಣೆ ಕೂಗಿ ಸಂಭ್ರಮಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಪುರಸಭೆ ಮಾಜಿ ಅಧ್ಯಕ್ಷೆ ವೆಂಕಟೇಶಮ್ಮರಾಮಕೃಷ್ಣಯ್ಯ, ಮಾಜಿ ಉಪಾಧ್ಯಕ್ಷರಾದ ವೈಶಾಲಿ ಚೆನ್ನಪ್ಪ, ಲಕ್ಷ್ಮೀದೇವಿರವಿಕುಮಾರ್, ಸದಸ್ಯರಾದ ದೇವರಾಜು, ಪಲ್ಲವಿ, ಬಿ.ಎಂ.ರಮೇಶ್​ಕುಮಾರ್, ರಾಕೇಶ್, ಟಿ. ಕುಮಾರ್, ಸಂತೋಷ್​ಕುಮಾರ್, ಶಿವಕುಮಾರ್, ಮಂಜುನಾಥ್, ಪುಟ್ಟಮಾದಯ್ಯ, ರಜನಿ ಶಿವಕುಮಾರ್ ಇತರರು ಇದ್ದರು.

ಜೆಡಿಎಸ್ ಕುದುರೆ ವ್ಯಾಪಾರ ಮಾಡಿದ ಉದಾಹರಣೆಯಿಲ್ಲ: ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಮಂಜುನಾಥ್, ಪುರಸಭೆ 15 ಸದಸ್ಯರ ಸಹಕಾರದಿಂದ ಜೆಡಿಎಸ್ ಮತ್ತೆ ಪುರಸಭೆ ಗದ್ದುಗೆ ಏರಿದೆ. ಜವಾಬ್ದಾರಿಯುತ ಶಾಸಕನಾಗಿ ಅಭಿವೃದ್ಧಿ ಮಾಡುವ ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸದಸ್ಯರು ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದಾರೆ. ಜೆಡಿಎಸ್ ಚುನಾವಣೆ ನಡೆಸುವಾಗ ಕುದುರೆ ವ್ಯಾಪಾರ ಮಾಡಿದ ಉದಾಹರಣೆಗಳಿಲ್ಲ. ಈ ಬಗ್ಗೆ ಹೇಳಿಕೆ ನೀಡಿರುವವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ರಾಮನಗರ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಹಾಗೂ ಎಪಿಎಂಸಿಯಲ್ಲಿ ಯಾವ ಪಕ್ಷದಿಂದ ಆಯ್ಕೆಯಾದವರು ಅಧ್ಯಕ್ಷರಾಗಿದ್ದಾರೆ ಎಂದು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕಾಂಗ್ರೆಸ್ಸಿಗರ ಹೇಳಿಕೆಗೆ ಶಾಸಕರು ತಿರುಗೇಟು ನೀಡಿದರು.

ಫಲಿಸದ ಕಾಂಗ್ರೆಸ್​ನ ವಿಪ್

ಪುರಸಭೆ ಚುನಾವಣೆ ವೇಳೆ ಕಾಂಗ್ರೆಸ್ ತನ್ನ 11 ಸದಸ್ಯರಿಗೆ ವಿಪ್ ಜಾರಿ ಮಾಡಿತ್ತು. ಅದಕ್ಕೆ ಸೊಪ್ಪು ಹಾಕದ 5 ಸದಸ್ಯರು ಜೆಡಿಎಸ್ ಬೆಂಬಲಿತ ಅಧ್ಯಕ್ಷ-ಉಪಾಧ್ಯಕ್ಷರಿಗೆ ಮತ ಚಲಾಯಿಸುವ ಮೂಲಕ ಕಳೆದ ಎರಡು ವರ್ಷಗಳಿಂದ ಜೆಡಿಎಸ್ ಜತೆಗಿದ್ದ ನಂಟನ್ನು ಮತ್ತಷ್ಟು ಗಟ್ಟಿ ಮಾಡುವ ಕೆಲಸ ಮಾಡಿರುವುದು ಕಂಡು ಬಂದಿತು.