* ಮೂಡ್ಲಳ್ಳಿದೊಡ್ಡಿಯ ಪೆರಿಯಣ್ಣನ ಕರುಣಾಜನಕ ಕಥೆ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಎಲ್ಲವೂ ಮಲಗಿದ್ದಲ್ಲೇ... ಊಟ, ಶೌಚ ಎಲ್ಲದಕ್ಕೂ ಅನ್ಯರ ನೆರವು... ಓಡಾಟ ಇಲ್ಲವೇ ಇಲ್ಲ...
ಇದು, 10 ವರ್ಷಗಳಿಂದ ಹಾಸಿಗೆಯಲ್ಲೇ ಬದುಕು ಸಾಗಿಸುತ್ತಿರುವ ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಹುಣಸನಹಳ್ಳಿ ಗ್ರಾಪಂನ ಮೂಡ್ಲಳ್ಳಿದೊಡ್ಡಿಯ ಪೆರಿಯಣ್ಣ (55) ಅವರ ಕರುಣಾಜನಕ ಕಥೆ.
ಪೆರಿಯಣ್ಣನ ಕುಟುಂಬಕ್ಕೆ ಜಮೀನಿಲ್ಲದ ಕಾರಣ ಕೂಲಿ ಮಾಡಿ ಜೀವನ ನಡೆಸುತ್ತಿದ್ದರು. ಹತ್ತು ವರ್ಷಗಳ ಹಿಂದೆ ಮರದಿಂದ ಬಿದ್ದು, ಕಾಲಿಗೆ ಪೆಟ್ಟಾಯಿತು. ಆದರೆ, ಆ ಪೆಟ್ಟು ಅವರನ್ನು ಮೇಲೆ ಏಳಿಸಲೇ ಇಲ್ಲ. ಇದರಿಂದ ಹಾಸಿಗೆಯಲ್ಲೇ ಎಲ್ಲವೂ ಎನ್ನುವಂತಾಗಿದೆ.
ಹಾಸಿಗೆ ಹಿಡಿದ ಪೆರಿಯಣ್ಣನನ್ನು ವೃದ್ಧ ತಾಯಿ ಯರಸಾನಮ್ಮ ಆರೈಕೆ ಮಾಡುತ್ತಿದ್ದಾರೆ. 8 ವರ್ಷಗಳಿಂದಲೂ ಸ್ನಾನ ಮಾಡಲು ಆಗಿಲ್ಲ. ಒದ್ದೆ ಬಟ್ಟೆಯಲ್ಲೇ ಅಮ್ಮನ ನೆರವಿನಿಂದ ಕೈ ಮುಖ ಒರೆಸಿಕೊಂಡು ಜೀವನ ನಡೆಸುತ್ತಾ ಬಂದಿದ್ದಾರೆ. ಮೂಡ್ಲಳ್ಳಿದೊಡ್ಡಿಯಲ್ಲಿದ್ದ ಚಿಕ್ಕ ಮನೆಯೂ ನಿರ್ವಹಣೆ ಇಲ್ಲದೆ ಮುರಿದುಬಿದ್ದಿದೆ. ಗ್ರಾಮದವರೊಬ್ಬರು ತೋಟದ ಮನೆ ಸಮೀಪದ ಜಾಗದಲ್ಲಿ ವಾಸಕ್ಕೆ ಜಾಗ ನೀಡಿದ್ದಾರೆ. ಅಂತೆಯೇ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ 1000 ರೂ. ಪ್ರತಿ ತಿಂಗಳು ಮಾಸಾಶನ ನೀಡಲಾಗುತ್ತಿದೆ.
ಸಂಕಷ್ಟದ ಬದುಕು ನಡೆಸುತ್ತಿರುವ ತಾಯಿ, ಮಗ ಸರ್ಕಾರ, ಸಂ&ಸಂಸ್ಥೆಗಳ ನೆರವಿನ ಕಡೆ ಮುಖಮಾಡಿದ್ದಾರೆ. ಆದರೆ, ಆಧಾರ್ ಕಾರ್ಡ್ ಇಲ್ಲದೆ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಅಂಗವಿಕಲನಾಗಿದ್ದರೂ ಆತ ವೈದ್ಯರ ಬಳಿ ಹೋಗಿ ದೃಢೀಕರಣ ಪತ್ರ ಮಾಡಿಸಲು ಸಾಧ್ಯವಾಗದೆ ಅಂಗವಿಕಲ ಮಾಸಾಸನ ಸಿಗದಂತಾಗಿದೆ. ಪಡಿತರ ಕಾರ್ಡ್ ಇದ್ದ ಕಾರಣ ಕಳೆದ ಕೆಲವು ತಿಂಗಳವರೆಗೆ ಪಡಿತರ ಸಿಗುತಿತ್ತು. ಆದರೆ, ಆಧಾರ್ ಕಾರ್ಡ್ ಇಲ್ಲದೆ ಇ ಕೆವೈಸಿ ಮಾಡಿಸದ ಕಾರಣ ಈಗ ಆ ಸೌಲಭ್ಯವೂ ದೊರಕದಂತಾಗಿದೆ.
ಆರೋಗ್ಯ ಸಮಸ್ಯೆ ಎದುರಾದರೆ ಬೇರೆಯವರೇ ಆಸ್ಪತ್ರೆಗೆ ಎತ್ತಿಕೊಂಡು ಹೋಗಬೇಕು. ಆದರೆ, ತಾಯಿ ಬಿಟ್ಟರೆ ಬೇರೆಯರು ಇಲ್ಲದ ಕಾರಣ ಎಂತಹುದೇ ಅನಾರೋಗ್ಯ ಎದುರಾದರೂ ಮಾತ್ರೆ ನುಂಗುವುದೇ ಔಷಧೋಪಚಾರವಾಗಿದೆ.
ಪೆರಿಯಣ್ಣನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆದರೆ ಹೆಂಡತಿ, ಮಕ್ಕಳು ಇವರ ಜತೆ ಇಲ್ಲ. 15 ವರ್ಷಗಳ ಹಿಂದೆಯೇ ದೂರವಾಗಿದ್ದಾರೆ ಎನ್ನಲಾಗಿದೆ.
ಪೆರಿಯಣ್ಣ ಅವರಿಗೆ ಆಧಾರ್ ಕಾರ್ಡ್ ಮಾಡಿಸಲು ಪ್ರಯತ್ನ ಪಡಲಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಮಾನವೀಯತೆ ದೃಷ್ಟಿಯಿಂದ ಅಂಗವಿಕಲ ಗುರುತಿನ ಚೀಟಿ ಇಲ್ಲದಿದ್ದರೂ ಗ್ರಾಪಂನಿಂದ ಅಂಗವಿಕಲರಿಗೆ ನೀಡುವ ಸೌಲಭ್ಯ ಕಲ್ಪಿಸಲಾಗಿದೆ.> ಪುಟ್ಟಸ್ವಾಮಿ, ಗ್ರಾಪಂ ಅಧ್ಯಕ್ಷ, ಹುಣಸನಹಳ್ಳಿ.ಕಾಲಿಗೆ ರಾಡು ಹಾಕಿರುವ ಕಾರಣ ಮೇಲೇಳಲು ಆಗುತ್ತಿಲ್ಲ. ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಆಧಾರ್ ಕಾರ್ಡ್ ಮಾಡಿಸಿಕೊಟ್ಟರೆ ಒಂದಷ್ಟು ಸೌಲಭ್ಯ ದೊರೆತು ಬದುಕಿಗೆ ದಾರಿಯಾಗಲಿದೆ. > ಪೆರಿಯಣ್ಣ, ಹಾಸಿಗೆ ಹಿಡಿದಿರುವ ವ್ಯಕ್ತಿ.ಮಗನಿಗೆ ನಡೆದಾಡಲು ಆಗುವುದಿಲ್ಲ, ಮಲಗಿದ್ದಲ್ಲಿಯೇ ಎಲ್ಲ. ವಯಸ್ಸಾದ ನನ್ನಿಂದ ಆತನ ಆರೈಕೆ ಕಷ್ಟವಾಗುತ್ತಿದೆ. ವಾಸಕ್ಕೆ ಗ್ರಾಮದವರು ನೆರವು ನೀಡಿದ್ದಾರೆ. ಸರ್ಕಾರ ಆಧಾರ್ ಕಾರ್ಡ್ ಮಾಡಿಸಿಕೊಟ್ಟು ಸೌಲಭ್ಯ ಕಲ್ಪಿಸಿದರೆ ಬದುಕಿಗೆ ಪ್ರಯೋಜನ ಆಗುತ್ತದೆ. > ಯರಸಾನಮ್ಮ, ತಾಯಿ