ಜಿಲ್ಲೆ

ಬಿ.ಇಡಿ ಕಾಲೇಜಿಗಿಲ್ಲ ವಿವಿ ಅಫಿಲಿಯೇಷನ್ ! ;  ತುಮಕೂರು ವಿವಿ ಎಡವಟ್ಟು ; ಕೇಂದ್ರೀಕೃತ ದಾಖಲಾತಿ ಘಟಕದಲ್ಲಿ ಅರ್ಜಿ ಸಲ್ಲಿಸಿದವರಿಗೆ ಶಾಕ್

Tumakuru

ತುಮಕೂರು : ಬಿ.ಇಡಿ.ಕೋರ್ಸ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಜಿಲ್ಲೆಯ ವಿದ್ಯಾರ್ಥಿಗಳು ಶಾಕ್‌ಗೆ ಒಳಗಾಗುವುದು ಖಚಿತ. ಹೌದು...2021-22ನೇ ಸಾಲಿನ 2 ವರ್ಷಗಳ ಕೋರ್ಸ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದ್ದು, ಅ.13 ರಾತ್ರಿ 12ರವರೆಗೆ ಅವಕಾಶವಿದೆ. ಆದರೆ, ಕಾಲೇಜುಗಳ ಆಯ್ಕೆ ಪಟ್ಟಿಯಲ್ಲಿ ಜಿಲ್ಲೆಯ ಕಾಲೇಜುಗಳ ಹೆಸರು ಇಲ್ಲದಿರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ 16 ಬಿ.ಇಡಿ., ಕಾಲೇಜುಗಳಿವೆ. 4 ಅನುದಾನಿತ, 12 ಅನುದಾನರಹಿತ ಕಾಲೇಜುಗಳಿದ್ದು ಅನುದಾನಿತ ಕಾಲೇಜುಗಳಲ್ಲಿ ಶೇ.75 ಸರ್ಕಾರಿ ಕೋಟಾದಡಿ ಸೀಟು ಹಂಚಿಕೆ ಮಾಡಲಾಗುವುದು. ಅನುದಾನರಹಿತ ಕಾಲೇಜುಗಳಲ್ಲಿ ಶೇ.50 ಸರ್ಕಾರಿ ಕೋಟಾ ಸೀಟುಗಳಿರಲಿವೆ. ಈ ಸೀಟುಗಳ ಹಂಚಿಕೆಯನ್ನು ಕೇಂದ್ರೀಕೃತ ದಾಖಲಾತಿ ಘಟಕದಲ್ಲಿ ಮಾಡಲಾಗಿದೆ. ಅದರಂತೆ ಸೆ.23ಕ್ಕೆ ಎರಡು ವರ್ಷಗಳ ಕೋರ್ಸ್‌ಗೆ ಅರ್ಜಿ ಆಹ್ವಾನಿಸಲಾಗಿದ್ದು ಅ.13ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಮೆರಿಟ್ ಹಾಗೂ ಮೀಸಲಾತಿ, ಆದ್ಯತೆ ಅನ್ವಯ ಸಂಸ್ಥೆ ಹಂಚಿಕೆ ಸಹಿತ ಆಯ್ಕೆ ಪಟ್ಟಿ, ಅರ್ಹತಾ ಪಟ್ಟಿ ಘಟಕವೇ ಅಂತಿಮಗೊಳಿಸಲಿದೆ. ತುಮಕೂರು ವಿಶ್ವವಿದ್ಯಾಲಯ ಈವರೆಗೆ ಘಟಕಕ್ಕೆ ವಿವಿಗೆ ಸಂಯೋಜನೆ ಆಗಿರುವ ಬಿ.ಇಡಿ., ಕಾಲೇಜುಗಳ ಪಟ್ಟಿ ನೀಡಿಲ್ಲ. ಹಾಗಾಗಿ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವೇಳೆ ಜಿಲ್ಲೆಯ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿಲ್ಲ.

ತುಮಕೂರು ವಿವಿ ಎಡವಟ್ಟು ? : ಜಿಲ್ಲೆಯ 16 ಬಿ.ಇಡಿ., ಕಾಲೇಜುಗಳಿಗಿನ್ನು ತುಮಕೂರು ವಿವಿ ಸಂಯೋಜನೆ ಮಾನ್ಯತೆ ಸಿಕ್ಕಿಲ್ಲ. ಪ್ರತಿವರ್ಷ ಅಫಿಲಿಯೇಷನ್ ಸಮಿತಿಯು ಕಾಲೇಜುಗಳಿಗೆ ತೆರಳಿ ಪರಿಶೀಲನೆ ಮಾಡಿದ ಬಳಿಕ ವಿವಿ ಸಂಯೋಜನೆ ಮಾನ್ಯತೆ ನೀಡಲಾಗುವುದು. ಕಾರಣಾಂತರಗಳಿಂದ ಈ ವರ್ಷ ವಿವಿ ಇನ್ನೂ ಸಮಿತಿಯನ್ನೇ ರಚಿಸಿಲ್ಲ. ಈಗ ಎಚ್ಚೆತ್ತುಕೊಂಡಿರುವ ವಿವಿ ಆತುರಾತುರದಲ್ಲಿ ಸಮಿತಿ ರಚಿಸಿ ಕಾಲೇಜುಗಳ ಪರಿಶೀಲನೆಗೆ ತೆರಳಲು ಸೂಚಿಸಿದೆ.

ಬಿ.ಇಡಿ., ಕೋರ್ಸ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವೇಳೆ ಕಾಲೇಜುಗಳ ಆಯ್ಕೆ ಪಟ್ಟಿಯಲ್ಲಿ ಜಿಲ್ಲೆಯ ತುಮಕೂರು ವಿವಿಯ ಯಾವುದೇ ಕಾಲೇಜುಗಳ ಹೆಸರಿಲ್ಲ. ಈ ಬಗ್ಗೆ ವಿಚಾರಿಸಿದರೂ ಸೂಕ್ತ ಮಾಹಿತಿ ಸಿಕ್ಕಿಲ್ಲ. ಮೆರಿಟ್ ಆಧಾರದಲ್ಲಿ ಸರ್ಕಾರಿ ಕೋಟಾದಡಿ ಸೀಟು ಪಡೆಯಲು ತೀರಾ ತೊಂದರೆ ಆಗಲಿದೆ. ಈ ಅನ್ಯಾಯ ಸರಿಪಡಿಸಿ ಜಿಲ್ಲೆಯ ಕಾಲೇಜುಗಳ ಆಯ್ಕೆಗೆ ಅವಕಾಶ ಕೊಡಬೇಕು. ಪ್ರಕಾಶ್ ವಿದ್ಯಾರ್ಥಿ ಜಿಲ್ಲೆಯ ಬಿ.ಇಡಿ., ಕಾಲೇಜುಗಳ ಅಫಿಲಿಯೇಷನ್ ಪ್ರಕ್ರಿಯೆ ವಿಳಂಬವಾಗಿದ್ದು, ಕೇಂದ್ರೀಕೃತ ದಾಖಲಾತಿ ಘಟಕಕ್ಕೆ ಸಂಯೋಜನೆ ಕಾಲೇಜುಗಳ ಪಟ್ಟಿ ನೀಡಲಾಗಿಲ್ಲ. ಹಾಗಾಗಿ, ಬಿ.ಇಡಿ., ಕೋರ್ಸ್‌ಗೆ ಅರ್ಜಿ ಸಲ್ಲಿಸುವ ದಿನಾಂಕ ಮುಂದೂಡುವಂತೆ ಘಟಕಕ್ಕೆ ಪತ್ರ ಬರೆಯಲಾಗಿದೆ. ಈಗ ಅಫಿಲಿಯೇಷನ್ ಸಮಿತಿ ರಚಿಸಿದ್ದು ಕಾಲೇಜುಗಳಿಗೆ ಭೇಟಿ ನೀಡಿ ವರದಿ ಕೊಟ್ಟ ಬಳಿಕ ಅಫಿಲಿಯೇಷನ್ ಕಾಲೇಜುಗಳ ಪಟ್ಟಿ ಸಲ್ಲಿಸಲಾಗುವುದು. ಪ್ರೊ.ವೈ.ಎಸ್.ಸಿದ್ದೇಗೌಡ ವಿವಿ ಕುಲಪತಿ