ಗಲಗಲಿ: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾದಾಗ ಮಾತ್ರ ತಮ್ಮ ಕುಟುಂಬವನ್ನು ಸಮರ್ಥವಾಗಿ ನಡೆಸುವುದರೊಂದಿಗೆ ಯಶಸ್ವಿಯಾಗಿ ಬದುಕು ನಡೆಸಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.
ಸ್ಥಳೀಯ ಸಿದ್ಧೇಶ್ವರ ಮಂಗಲ ಕಾರ್ಯಾಲಯದಲ್ಲಿ ಅಕ್ಕಮಹಾದೇವಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದವರು ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಮನೆಯಲ್ಲೇ ಕುಳಿತು ಉದ್ಯೋಗ ಮಾಡಲು ಉತ್ತಮ ಅವಕಾಶಗಳಿವೆ. ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಯೋಗ್ಯ ಆದಾಯ ಗಳಿಸುವ ಮೂಲಕ ಆರ್ಥಿಕ ಸಬಲತೆ ಹಾಗೂ ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸಲು ಸಾಧ್ಯವಿದೆ ಎಂದರು.
ಸುಮಿತ್ರಾ ಗೋಳಿಪಲ್ಲೆ ಅಧ್ಯಕ್ಷತೆ ವಹಿಸಿದ್ದರು. ವಿವಿಧ ವೇಷಭೂಷಣ ಧರಿಸಿದ ಮಹಿಳೆಯರಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಸಾಧಕಿಯರಿಗೆ ಸನ್ಮಾನ ಮಾಡಲಾಯಿತು.
ತಾಪಂ ಮಾಜಿ ಉಪಾಧ್ಯಕ್ಷೆ ರೂಪಾ ಹಿರೇಮಠ, ಶಿಕ್ಷಕಿ ಅರುಂಧತಿ ಬಾಳಶೆಟ್ಟಿ, ಮಹಿಳಾ ಒಕ್ಕೂಟದ ಅಧ್ಯಕ್ಷೆ ರೇಣುಕಾ ತುಪ್ಪದ, ಶಿವಕ್ಕ ಗೋಠೆ, ದಾನಮ್ಮ ಮಂಗಸೂಳಿ, ಸಾವಿತ್ರಿ ಗುತ್ತಿಗೌಡರ ಮತ್ತಿತರರಿದ್ದರು. ಶಿವಲೀಲಾ ತುಪ್ಪದ ನಿರೂಪಿಸಿ, ವಂದಿಸಿದರು.