ಕಲಾದಗಿ: ನಮ್ಮ ನಿತ್ಯದ ಬದುಕು, ಪರಿಸರದಲ್ಲಿ ವಿಜ್ಞಾನ ಹಾಸುಹೊಕ್ಕಾಗಿದ್ದು, ಮಕ್ಕಳು ಅದನ್ನು ಅರ್ಥಮಾಡಿಕೊಂಡು ಭವಿಷ್ಯದಲ್ಲಿ ಜಗದುಪಕಾರವಾಗುವ ಶ್ರೇಷ್ಠ ವಿಜ್ಞಾನಿಗಳಾಗಬೇಕೆಂದು ಹಣ್ಣು ಬೆಳೆಗಾರರ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಟಿ. ಪಾಟೀಲ ಹೇಳಿದರು.
ಇಲ್ಲಿನ ಹಣ್ಣು ಬೆಳೆಗಾರರ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ ಗುರುವಾರ ನಡೆದ ವಿಜ್ಞಾನ ವಸ್ತುಪ್ರದರ್ಶನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕಲಿಕೆಯ ಪ್ರತಿ ಹಂತದಲ್ಲೂ ವೈಜ್ಞಾನಿಕ ಸಂಶೋಧನೆ ಮನಸ್ಥಿತಿ ರೂಢಿಸಿಕೊಳ್ಳಬೇಕು ಎಂದರು.
ಸಂಸ್ಥೆ ಕಾರ್ಯದರ್ಶಿ ವಿ.ಜಿ. ದೇಶಪಾಂಡೆ, ಭಾರತದ ವಿಜ್ಞಾನಿಗಳ ಅಪ್ರತಿಮ ಸಾಧನೆಯನ್ನು ಸ್ಫೂರ್ತಿಯಾಗಿರಿಸಿಕೊಂಡು ಕುತೂಹಲ, ದೂರದೃಷ್ಟಿ, ಪ್ರಯೋಗಶೀಲ ಮತ್ತು ಪಾಲ್ಗೊಳ್ಳುವಿಕೆ ಮೂಲಕ ವಿದ್ಯಾರ್ಥಿಗಳು ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳಬೇಕು ಎಂದರು.
ಸಂಸ್ಥೆ ಮುಖ್ಯಶಿಕ್ಷಕ ಆರ್.ವಿ. ಜಾಧವ, ಶ್ರೀಕಾಂತ ಕೆರಕಲಮಟ್ಟಿ, ಜಗದೀಶ ಚಾವಡಿ ಇದ್ದರು.
ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ಪ್ರಾತ್ಯಕ್ಷಿಕೆಗಳು ಗಮನ ಸೆಳೆದವು. ಅತ್ಯುತ್ತಮವಾಗಿ ಮಾದರಿಗಳನ್ನು ವಿವರಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.