ತೇರದಾಳ ಪಟ್ಟಣದ ದಾನಿಗೊಂಡ ಪಿ.ಯು. ಮಹಾವಿದ್ಯಾಲಯದಲ್ಲಿ ನಡೆದ ಚಾರ್ಟರ್ಡ್ ಅಕೌಂಟಂಟ್ ಮತ್ತು ಲೆಕ್ಕಪರಿಶೋಧಕರ ಕಂಪನಿಯ ಕಾರ್ಯದರ್ಶಿ ಕುರಿತ ಕಾರ್ಯಾಗಾರವನ್ನು ಧಾರವಾಡದ ಲೆಕ್ಕ ಪರಿಶೋಧಕ ವಿಠ್ಠಲ ಗುತ್ತಿ ಉದ್ಘಾಟಿಸಿದರು. ಡಾ. ಮಹಾವೀರ ದಾನಿಗೊಂಡ, ದೀಪಾ ತಳವಾರ ಇದ್ದರು. 
ಜಿಲ್ಲೆ

ದೇಶದ ಆರ್ಥಿಕ ವಲಯದ ಅಭಿವೃದ್ಧಿಗಾಗಿ ಲೆಕ್ಕ ಪರಿಶೋಧಕರಾಗಿ!

ತೇರದಾಳ: ದೇಶದ ಸದೃಢ ಮತ್ತು ಸಮಗ್ರ ಆರ್ಥಿಕತೆಯ ಬೆಳವಣಿಗೆಗಾಗಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಲೆಕ್ಕ ಪರಿಶೋಧಕರಾದಾಗ ಮಾತ್ರ ಆರ್ಥಿಕ ವಲಯದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಧಾರವಾಡದ ಲೆಕ್ಕಪರಿಶೋಧಕ ವಿಠ್ಠಲ ಗುತ್ತಿ ಹೇಳಿದರು.

ಸ್ಥಳೀಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ದಾನಿಗೊಂಡ ಪಿ.ಯು. ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಚಾರ್ಟರ್ಡ್ ಅಕೌಂಟಂಟ್ ಮತ್ತು ಲೆಕ್ಕಪರಿಶೋಧಕರ ಕಂಪನಿಯ ಕಾರ್ಯದರ್ಶಿ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನಿ ಮೋದಿ ಅವರೇ ಹೇಳಿದಂತೆ ಒಬ್ಬ ರಾಷ್ಟ್ರಪತಿಗಿಂತ ಒಬ್ಬ ಲೆಕ್ಕಪರಿಶೋಧಕನ ಸಹಿ ಹೆಚ್ಚಿನ ಮೌಲ್ಯ ಪಡೆದುಕೊಳ್ಳುತ್ತದೆ ಎಂದಿದ್ದು, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿವೆ ಎಂಬುದನ್ನು ಅರ್ಥ ಮಾಡಿಕೊಳ್ಳತಕ್ಕದ್ದು, ಹಾಗಾಗಿ ಎಲ್ಲ ವಿದ್ಯಾರ್ಥಿಗಳು ಉತ್ತಮ ಕಲಿಕೆ ಹಾಗೂ ಲಿತಾಂಶ ಪಡೆದುಕೊಳ್ಳುವ ಮೂಲಕ ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳುವಂತೆ ತಿಳಿಸಿದರು.

ಸಂಸ್ಥೆ ಅಧ್ಯಕ್ಷ ಡಾ. ಮಹಾವೀರ ದಾನಿಗೊಂಡ, ಲೆಕ್ಕ ಪರಿಶೋಧಕರ ಕಾರ್ಯಾಗಾರದಲ್ಲಿ ಭಾಗಿಯಾದ ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಸಮಾಜ ಮತ್ತು ರಾಷ್ಟ್ರದ ಗೌರವ ಹೆಚ್ಚಿಸಬೇಕೆಂದು ಹೇಳಿದರು.

ಜಮಖಂಡಿಯ ದೀಪಾ ತಳವಾರ ಅವರು ವಾಣಿಜ್ಯ ವಿಭಾಗದ ಅವಕಾಶಗಳ ಕುರಿತಂತೆ ಮಾಹಿತಿ ನೀಡಿದರು.

ಪ್ರಾಚಾರ್ಯ ಡಾ. ಸಂತೋಷ ಕೃಷ್ಣಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಠ್ಠಲ ಮುರಾರಿ ಸ್ವಾಗತಿಸಿ, ಅಮೋಘ ಕಂಕನವಾಡಿ ವಂದಿಸಿ, ಬಿ.ಎಸ್. ನೇಗಿನಾಳ ನಿರೂಪಿಸಿದರು.