ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೇಂದ್ರ ಕಾರಾಗೃಹ, ಸಾಧನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ, ಎಮ್ಮಿಕೇರಿಯ ಎಂಜಲ್ ಬ್ಯೂಟಿ ಸಲೂನ್ ಮತ್ತು ಅಕಾಡೆಮಿ ಆಶ್ರಯದಲ್ಲಿ ನಗರದ ಕೇಂದ್ರ ಕಾರಾಗೃಹದ ಮಹಿಳಾ ಬಂಧಿಗಳಿಗೆ 3 ತಿಂಗಳ ಕಾಲ ಆಯೋಜಿಸಿರುವ ಬ್ಯೂಟಿ ಪಾರ್ಲರ್ ತರಬೇತಿ ಶಿಬಿರಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಮೂರನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಜರೀನಾ ಶಿಬಿರ ಉದ್ಘಾಟಿಸಿ ಮಾತನಾಡಿ, ಕೇಂದ್ರ ಕಾರಾಗೃಹದಲ್ಲಿನ ಮಹಿಳಾ ಬಂಧಿಗಳಿಗೆ ಬ್ಯೂಟಿ ಪಾರ್ಲರ್ ತರಬೇತಿ ಆಯೋಜಿಸಿದ್ದು ಶ್ಲಾಘನೀಯ. ಮಹಿಳಾ ಬಂಧಿಗಳು ತರಬೇತಿ ಕಾರ್ಯಾಗಾರದ ಪ್ರಯೋಜನ ಪಡೆಯಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ, ಕೇಂದ್ರ ಕಾರಾಗೃಹದ ಅಧೀಕ್ಷಕ ಪಿ. ಮಹದೇವ ನಾಯ್ಕ, ಉಪ ಅಧೀಕ್ಷಕಿ ನಿರ್ಮಲಾ ಬಿ.ಆರ್., ಸಾಧನಾ ಸಂಸ್ಥೆ ಸಂಸ್ಥಾಪಕಿ ಡಾ. ಇಸಬೆಲ್ಲಾ ಝೇವಿಯರ್, ವಿಶ್ವೇಶ್ವರಿ ಹಿರೇಮಠ, ವೆಂಕಮ್ಮ ಸೋಮಾಪುರ, ಸದಸ್ಯರಾದ ಸವಿತಾ ಸರನಾಡಗೌಡರ, ಅನಿತಾ ಜಕ್ಕಲಿ, ಸಿಸ್ಟರ್ ಸಾಲಿ ಡಿಸೋಜ, ಇತರರು ಇದ್ದರು. ಶೈಲಜಾ ನಾಯ್ಕ ವಂದಿಸಿದರು.