ಚಿಕ್ಕೋಡಿ: ಯಕ್ಸಂಬಾದ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿಯು ಪಾರದರ್ಶಕ ಆಡಳಿತ ಮತ್ತು ಸೇವೆ ನೀಡುತ್ತಿದ್ದು, ಗೋವಾ ಹಾಗೂ ಗುಜರಾತ್‌ನಲ್ಲಿ ಶಾಖೆ ಆರಂಭಿಸುವ ಗುರಿ ಹೊಂದಿದೆ ಎಂದು ಸಂಸ್ಥಾಪಕ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದ್ದಾರೆ.
ಸಮೀಪದ ಯಕ್ಸಂಬಾ ಪಟ್ಟಣದಲ್ಲಿ ಶನಿವಾರ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿಯ 30ನೇ, ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘದ 27ನೇ, ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿಯ 26ನೇ, ಜೊಲ್ಲೆ ಎಜುಕೇಶನ್ ಸೊಸೈಟಿಯ 25ನೇ, ಯಕ್ಸಂಬಾ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘದ 13ನೇ ಹಾಗೂ ಲೋಕ ಕಲ್ಯಾಣ ಕಟ್ಟಡ ಮತ್ತು ಇತರ ಕಾರ್ಮಿಕರ ಸಂಘದ 9ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಹಕಾರಿಯು ಹಣಕಾಸು ಸೇರಿ ಸರ್ಕಾರದ ವಿವಿಧ ಸೇವೆಗಳನ್ನು ಒಂದೇ ಸೂರಿನಡಿ ನೀಡಲು ಬದ್ಧವಾಗಿದೆ ಎಂದರು. ಬೀರೇಶ್ವರ ಸಹಕಾರಿಯು ಕರ್ನಾಟಕ, ಮಹಾರಾಷ್ಟ್ರ ಸೇರಿ 153 ಶಾಖೆ ಹೊಂದಿದ್ದು, ಮುಂಬರುವ ದಿನಗಳಲ್ಲಿ 43 ಶಾಖೆ ಪ್ರಾರಂಭಿಸುವ ಗುರಿ ಹೊಂದಿದೆ.
ಬೇಡಿಕೆಗನುಗುಣವಾಗಿ ಇನ್ನಷ್ಟು ಶಾಖೆ ತೆರೆಯಲಾಗುವುದು. ಸಹಕಾರಿಯು ಕೇವಲ ಠೇವು ಸಂಗ್ರಹಿಸಿ ಸಾಲ ನೀಡುವುದಕ್ಕೆ ಸೀಮಿತವಾಗದೆ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಸೇವೆ ನೀಡುತ್ತಿದೆ ಎಂದರು. ಬೀರೇಶ್ವರ ಸಹಕಾರಿ ಸಂಸ್ಥೆಯು 2.87 ಲಕ್ಷ ಸದಸ್ಯರನ್ನು ಹೊಂದಿದೆ. 2,332 ಕೋಟಿ ರೂ.ಠೇವು ಸಂಗ್ರಹಿಸಿದೆ. 1,740 ಕೋಟಿ ರೂ. ಸಾಲ ವಿತರಿಸಿ, 15.26 ಕೋಟಿ ರೂ. ಲಾಭ ಗಳಿಸಿದೆ ಎಂದರು.
ಜೊಲ್ಲೆ ಉದ್ಯೊಗ ಸಮೂಹ ಸಂಸ್ಥೆಗಳ ಕೆಲ ಸದಸ್ಯರು ಮತ್ತು ಸಿಬ್ಬಂದಿ ನಿಧನರಾದ ಹಿನ್ನೆಲೆಯಲ್ಲಿ ಅವರ ಕುಟುಂಬದ ಸದಸ್ಯರಿಗೆ ವಿವಿಧ ಯೋಜನೆಗಳ ಮೂಲಕ ಮಂಜೂರಾದ ಮರಣೋತ್ತರ ಆರ್ಥಿಕ ಸಹಾಯಧನ ಚೆಕ್ ವಿತರಿಸಲಾಯಿತು.
ಬೀರೇಶ್ವರ ಸಹಕಾರಿ ಅಧ್ಯಕ್ಷ ಜಯಾನಂದ ಜಾಧವ, ಹಾಲಶುಗರ್ ನಿರ್ದೇಶಕ ಅಪ್ಪಾಸಾಹೇಬ ಜೊಲ್ಲೆ, ಲೆಕ್ಕ ಪರಿಶೋಧಕ ರವಿ ಕರಾಡಕರ, ಲಕ್ಷ್ಮಣ ಕಬಾಡೆ, ಕಲ್ಲಪ್ಪ ಜಾಧವ, ಜ್ಯೋತಿಪ್ರಸಾದ ಜೊಲ್ಲೆ, ಸಹಕಾರಿ ಆಡಳಿತ ಮಂಡಳಿ ಮತ್ತು ಸಲಹಾ ಸಮಿತಿ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಬಸವಪ್ರಸಾದ ಜೊಲ್ಲೆ ಸ್ವಾಗತಿಸಿದರು. ಗೂಗಲ್ ಮೀಟ್ ಮೂಲಕ ಸಲಹೆ-ಸೂಚನೆ ಮತ್ತು ತಮ್ಮ ಅನಿಸಿಕೆ ಹಂಚಿಕೊಳ್ಳಲು ಅವಕಾಶ ನೀಡಲಾಗಿತ್ತು. 153 ಶಾಖೆಗಳಲ್ಲಿ ಆನ್‌ಲೈನ್ ಮೂಲಕ ಕಾರ್ಯಕ್ರಮ ಬಿತ್ತರಿಸಲಾಯಿತು.
ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಜನಸಾಮಾನ್ಯರಿಗೆ ಸಹಕಾರಿ ಸಂಸ್ಥೆಗಳು ಉತ್ತಮ ಸೇವೆ ನೀಡುತ್ತಿವೆ. ಅದಕ್ಕೆ ಜೊಲ್ಲೆ ಉದ್ಯೋಗ ಸಮೂಹವೂ ಹೊರತಾಗಿಲ್ಲ. ಬೀರೇಶ್ವರ ಸಂಸ್ಥೆ 30 ವರ್ಷಗಳಲ್ಲಿ ಕಳಂಕರಹಿತವಾಗಿ ಕಾರ್ಯ ನಿರ್ವಹಿಸಿದ್ದು, ಸಿಬ್ಬಂದಿಯ ಪ್ರಾಮಾಣಿಕ ಪ್ರಯತ್ನ, ಸದಸ್ಯರ ವಿಶ್ವಾಸದಿಂದ ಅದು ಸಾಧ್ಯವಾಗಿದೆ.| ಶಶಿಕಲಾ ಜೊಲ್ಲೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ