ಜಿಲ್ಲೆ

VIDEO| ಪ್ರಯಾಣಿಕರ ತಂಗುದಾಣದಲ್ಲಿ ದೈತ್ಯ ಕರಡಿ! ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೆ ಸಂಚಕಾರ

arunakunigal

ತುಮಕೂರು: ಜನರೇ ತಂಗುದಾಣಗಳತ್ತ ಹೋಗೋ ಮುನ್ನ ಎಚ್ಚರ! ಸ್ವಲ್ಪ ಯಾಮಾರಿದರೂ ಪ್ರಾಣಕ್ಕೆ ಸಂಚಕಾರ ಕಟ್ಟಿಟ್ಟ ಬುತ್ತಿ!

ಹೌದು, ಇಲ್ಲಿನ ದೃಶ್ಯ ನೋಡಿದ್ರೆ ಹೀಗೆ ಹೇಳಬೇಕನ್ನಿಸುತ್ತದೆ. ನಿತ್ಯ ನೂರಾರು ಜನರು ವಾಯುವಿಹಾರಕ್ಕೆಂದು ಬೆಳ್ಳಂಬೆಳಗ್ಗೆ ಮತ್ತು ಸಂಜೆ ವೇಳೆ ಬರುವ ದಾರಿಯಲ್ಲೇ ದೈತ್ಯ ಕರಡಿಯೊಂದು ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ ಇದು ಪ್ರವಾಸಿ ತಾಣ ಕೂಡ.

ನಗರದ ಕೂಗಳತೆ ದೂರದಲ್ಲೇ ಇರುವ ದೇವರಾಯನದುರ್ಗ ಮತ್ತು ನಾಮದಚಿಲುಮೆಗೆ ಪ್ರವಾಸಿಗರು ಮಾತ್ರವಲ್ಲ ಸುತ್ತಮುತ್ತಲ ಜನರು ನಿತ್ಯ ವಾಯುವಿಹಾರಕ್ಕೆ ಬರುತ್ತಾರೆ. ಅರಣ್ಯ ಪ್ರದೇಶದಲ್ಲಿರುವ ಈ ಸ್ಥಳಕ್ಕೆ ಬರುವ ಮಾರ್ಗಮಧ್ಯೆ ಅಲ್ಲಲ್ಲೇ ಕುಳಿತು ಹರಟೆ ಹೊಡೆಯುವವರಿಗೇನೂ ಕಮ್ಮಿ ಇಲ್ಲ. ಇಂತಹ ಸ್ಥಳದಲ್ಲಿ ಕರಡಿ, ಚಿರತೆ ಸೇರಿದಂತೆ ಕಾಡುಪ್ರಾಣಿಗಳ ಚಲನವಲನ ಇದೆ ಎಂಬುದು ಗೊತ್ತಿರುವ ವಿಷಯವೇ. ಆದರೆ ಇಲ್ಲಿನ ಬಸ್ ನಿಲ್ದಾಣದಲ್ಲಿರುವ ಪ್ರಯಾಣಿಕರ ತಂಗುದಾಣದಲ್ಲಿ ರಾತ್ರಿ ವೇಳೆ ದೈತ್ಯ ಕರಡಿಯೊಂದು ಆಶ್ರಯ ಪಡೆಯುತ್ತಿದೆ..!

ಹಾಗಾಗಿ ಹೇಳಿದ್ದು, ತಂಗುದಾಣಗಳತ್ತ ಹೋಗೋ ಮುನ್ನ ಎಚ್ಚರ! ಅರಣ್ಯ ವ್ಯಾಪ್ತಿಯಲ್ಲಿನ ಈ ತಂಗುದಾಣದಲ್ಲಿ ಮನುಷ್ಯರೇ ಇರಬೇಕಂತಿಲ್ಲ, ಕಾಡುಪ್ರಾಣಿಗಳೂ ಕೆಲಕಾಲ ವಾಸ್ತವ್ಯ ಹೂಡಿರುತ್ತವೆ. ಇಂತಹದ್ದೇ ಘಟನೆ ನಾಮಚಿಲುಮೆ ಕ್ರಾಸ್​ನ ಪ್ರಯಾಣಿಕರ ತಂಗದಾಣದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ತಂಗುದಾಣದಲ್ಲಿ ಯಾರೋ‌‌ ವ್ಯಕ್ತಿ ಬಿದ್ದಿದ್ದಾರೆ ಎಂದು ಕಾರಿನಲ್ಲಿ ತೆರಳುತ್ತಿದ್ದವರು ಹತ್ತಿರ ಹೋಗುತ್ತಿದ್ದಂತೆ ಅದು ಕರಡಿ ಎಂದು ಗೊತ್ತಾಗುತ್ತಿದ್ದಂತೆ ಗಾಬರಿಯಾಗಿದ್ದಾರೆ. ಕೂಡಲೇ ಅಲ್ಲಿಂದ ಕರಡಿ ಹೊರ ಹೋಗಿದೆ. ಈ ವಿಡಿಯೋ ವೈರಲ್​ ಆಗಿದೆ.