ಸರಗೂರು ತಾಲೂಕಿನ ಜಯಲಕ್ಷ್ಮೀಪುರ ಗ್ರಾಮದ ಪ್ರಕಾಶ್ ಕರಡಿ ದಾಳಿಗೆ ಒಳಗಾಗಿ ಒದ್ದಾಡಿದ ದೃಶ್ಯ.  
ಜಿಲ್ಲೆ

ರೈತನ ಮೇಲೆ ಕರಡಿ ದಾಳಿ

ಶಿವಶಂಕರ್ ಎಂ. ಹೆಬ್ಬಳ್ಳ

ಸರಗೂರು : ಜಯಲಕ್ಷೀಪುರ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಜಮೀನಿನಲ್ಲಿ ಜಾನುವಾರು ಮೇಯಿಸುತ್ತಿದ್ದ ರೈತನ ಮೇಲೆ ಕರಡಿ ದಾಳಿ ನಡೆಸಿ ಗಾಯಗೊಳಿಸಿದೆ.

ತಾಲೂಕಿನ ಎಂ.ಸಿ.ತಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಯಲಕ್ಷೀಪುರ ಗ್ರಾಮದ ರೈತ ಪ್ರಕಾಶ್ (35) ಕರಡಿ ದಾಳಿಗೆ ಒಳಗಾದವರು. ಜಾನುವಾರುಗಳನ್ನು ಜಮೀನಿನಲ್ಲಿ ಮೇಯಿಸಲು ಹೋಗಿದ್ದ ವೇಳೆ ಪೊದೆಯಲ್ಲಿದ್ದ ಕರಡಿ ಏಕಾಏಕಿ ದಾಳಿ ನಡೆಸಿ ಗಾಯಗೊಳಿಸಿದೆ. ಅವರ ಚೀರಾಟದಿಂದ ಅಕ್ಕ ಪಕ್ಕದ ಜಮೀನಲ್ಲಿದ್ದ ರೈತರು ಬಂದು ಕರಡಿಯನ್ನು ಓಡಿಸಿದ್ದಾರೆ. ಸ್ಥಳಕ್ಕೆ ಹೆಡಿಯಾಲ ವಲಯದ ಅರಣ್ಯ ಎಸಿಎಫ್ ಸತೀಶ್ ಧಾವಿಸಿ ಪರಿಶೀಲನೆ ನಡೆಸಿ ಸರಗೂರು ಪಟ್ಟಣದ ವಿವೇಕಾನಂದರ ಆಸ್ಪತ್ರೆಗೆ ಗಾಯಾಳು ಪ್ರಕಾಶ್ ಅವರನ್ನು ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ಬಂದ ಕೂಡಲೇ ಗ್ರಾಮಸ್ಥರು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ವನ್ಯಜೀವಿಗಳ ಹಾವಳಿಯಿಂದ ಜಮೀನಿಗೆ ರೈತರು ಮತ್ತು ಮಹಿಳೆಯರು ಜಮೀನಿಗೆ ಕೆಲಸ ಮಾಡಲು ಸಾಧ್ಯವಾಗುವುತ್ತಿಲ್ಲ ಎಂದು ತರಾಟೆ ತೆಗೆದುಕೊಂಡರು.

ಗ್ರಾಮದ ಮುಖಂಡ ವೆಂಕಟರಾಮು ಮಾತನಾಡಿ, ನಮ್ಮ ಗ್ರಾಮದ ದಟ್ಟ ಕಾಡಂಚಿನ ಭಾಗದಲ್ಲಿ ಇದೆ. ಹಗಲು,ರಾತ್ರಿಯೆನ್ನದೆ ಕಾಡು ಪ್ರಾಣಿಗಳು ದಿನನಿತ್ಯ ಗ್ರಾಮದ ಒಳಗಡೆ ಹಾಗೂ ಜಮೀನುಗಳಿಗೆ ಬರುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಗ್ರಹಿಸಿದರು.

ಶಾಲಾ ಕಾಲೇಜು ವಿದ್ಯಾರ್ಥಿಗಳು ಕಾಡು ಪ್ರಾಣಿಗಳಿಂದ ತಪ್ಪಿಸಿಕೊಂಡು ಹೋಗುವ ಪರಿಸ್ಥಿತಿ ಬಂದಿದೆ. ನಾವು ಜಮೀನಿನಲ್ಲಿ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಲು ಕಾಡು ಪ್ರಾಣಿಗಳು ಬಿಡುತ್ತಿಲ್ಲ. ನಾಶವಾದ ಬೆಳೆಗೆ ಸೂಕ್ತ ಪರಿಹಾರವನ್ನೂ ನೀವು ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೆಡಿಯಾಲ ವಲಯದ ಅರಣ್ಯಾಧಿಕಾರಿ ಸತೀಶ್ ಮಾತನಾಡಿ, ಕರಡಿ ದಾಳಿಗೆ ಗಾಯಗೊಂಡ ಒಳಗಾದ ರೈತ ಪ್ರಕಾಶ್ ಅವರಿಗೆ ಹೆಚ್ಚಿನ ರೀತಿಯಲ್ಲಿ ನಮ್ಮ ಇಲಾಖೆ ವತಿಯಿಂದ ಚಿಕಿತ್ಸೆ ಕೊಡಿಸಲು ಮುಂದಾಗಿದ್ದೇವೆ. ಅದರಂತೆ ಸರ್ಕಾರ ಮಟ್ಟದಿಂದ ಪರಿಹಾರ ನೀಡುವ ಬಗ್ಗೆ ಮಾಹಿತಿಯನ್ನು ನಮ್ಮ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.