ತರೀಕೆರೆ: ಬಿ.ಸಿದ್ದರಹಳ್ಳಿ ಹಾಗೂ ಜಂಬದಹಳ್ಳ ಗ್ರಾಮ ನಡುವಿನ ಅಡಕೆ ತೋಟದಲ್ಲಿ ರೈತನ ಮೇಲೆ ಕರಡಿ ದಾಳಿ ನಡೆಸಿ ಎದೆಗೆ ಪರಚಿ ಗಾಯಗೊಳಿಸಿದೆ.
ಮಂಗಳವಾರ ಬೆಳಗ್ಗೆ ಅಡಕೆ ತೋಟಕ್ಕೆ ತೆರಳಿದ್ದ ಬಿ.ಸಿದ್ದರಹಳ್ಳಿ ಬಿ.ಸೋಮಶೇಖರ್ (50) ಎಂಬುವವರ ಮೇಲೆ ಕರಡಿ ದಾಳಿ ನಡೆಸಿದೆ. ದಾಳಿಗೆ ಗಾಯಗೊಂಡ ಟಿ.ಬಿ.ಸೋಮಶೇಖರ್ ದೊಣ್ಣೆ ಹಿಡಿದು ಪ್ರತಿ ದಾಳಿ ನಡೆಸಿದ್ದರಿಂದ ಕರಡಿ ಓಡಿಹೋಗಿದೆ. ಸೋಮಶೇಖರ್ ಚೇತರಿಸಿಕೊಂಡು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ತೆರಳಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ತೆರಳಿದರು. ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಘಟನಾ ಸ್ಥಳ ಪರಿಶೀಲನೆ ನಡೆಸಿದರು.
ಒಂದು ತಿಂಗಳಿನಿಂದ ಕರಡಿ ಸಂಚಾರ ನಿರಂತರವಾಗಿದ್ದು, ಅರಣ್ಯ ಇಲಾಖೆ ಕರಡಿ ಸೆರೆ ಹಿಡಿಯಲು ಬೋನು ಇರಿಸಿದ್ದರೂ ಅದು ಪ್ರಯೋಜನಕ್ಕೆ ಬಾರದಂತಾಗಿದೆ.