ಜಿಲ್ಲೆ

ಬಸನಕಟ್ಟಿ ಗ್ರಾಮದಲ್ಲಿ ಕರಡಿ ದಾಳಿ, ಇಬ್ಬರು ರೈತರಿಗೆ ಗಂಭೀರ ಗಾಯ

ಶಿಗ್ಗಾಂವಿ: ಜಮೀನಿನಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿದ್ದ ರೈತರ ಮೇಲೆ ಕರಡಿಗಳು ಏಕಾಏಕಿ ದಾಳಿ ನಡೆಸಿದ ಘಟನೆ ಶನಿವಾರ ಮಧ್ಯಾಹ್ನ ತಾಲೂಕಿನ ಬಸನಕಟ್ಟಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ರೈತರಿಗೆ ಗಂಭೀರ ಗಾಯಗಳಾಗಿವೆ.

ತಾಲೂಕಿನ ಬಸನಕಟ್ಟಿ ಗ್ರಾಮದ ರೈತರಾದ ಬಸಿರಸಾಬ ಸೈಯದ್​ಸಾಬ್ ಸೌದತ್ತಿ, ರಜಾಕ್ ನಾಲಬಂದ್ ಎಂಬುವವರು ಕೃಷಿ ಕಾರ್ಯದಲ್ಲಿ ನಿರತರಾಗಿದ್ದ ವೇಳೆ ಏಕಾಏಕಿ ಮೂರು ಕರಡಿಗಳು ದಾಳಿ ಮಾಡಿವೆ. ಮುಖ, ಕೈಕಾಲು, ಮೈ ಮೇಲೆ ಗಂಭೀರವಾಗಿ ಗಾಯಗೊಳಿಸಿದ್ದು, ಅದೃಷ್ಟವಷಾತ್ ಪ್ರಾಣ ಹಾನಿ ಸಂಭವಿಸಿಲ್ಲ. ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ತಕ್ಷಣ ಧಾವಿಸಿ ಕರಡಿ ದಾಳಿಗೊಳಗಾದ ರೈತರನ್ನು ಬಚಾವು ಮಾಡಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್​ಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಬಂಕಾಪುರ ಪೊಲೀಸ್ ಠಾಣೆ ಸಿಬ್ಬಂದಿ ದಾಳಿಯ ಪರಿಶೀಲನೆ ನಡೆಸಿದ್ದಾರೆ. ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.