ಹೊಳೆನರಸೀಪುರ: ಆರೋಗ್ಯ ರಕ್ಷಣೆ ವಿಷಯದಲ್ಲಿ ಸಾರ್ವಜನಿಕರು ಜಾಗೃತರಾಗಬೇಕು ಎಂದು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.
ತಾಲೂಕಿನ ಹಳ್ಳಿ ಮೈಸೂರು ಹೋಬಳಿಯ ಗುಡ್ಡೇನಹಳ್ಳಿ ಸಮೀಪದ ಡಾ. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಗುರುವಾರ ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿ(ರಿ) ಮತ್ತು ಕರ್ನಾಟಕ ರಾಜ್ಯ ಹಾಸನ ಜಿಲ್ಲಾ ಪ್ರಸೂತಿ ಮತ್ತು ಸ್ತೀ ರೋಗ ತಜ್ಞರ ಸಂಘ, ಹಾಸನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಇನ್ನರ್ ವ್ಹೀಲ್ ಕ್ಲಬ್ ಆಫ್ ಹಾಸನ್ ಗೋಲ್ಡ್ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ 9 ವರ್ಷದಿಂದ 14 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಎಚ್‌ಪಿವಿ ಚುಚ್ಚುಮದ್ದು, ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟಲು ಉಚಿತವಾಗಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಚ್‌ಪಿವಿ ಚುಚ್ಚುಮುದ್ದನ್ನು ಮುಂಜಾಗ್ರತೆಯಾಗಿ ತೆಗೆದುಕೊಂಡರೆ ಕ್ಯಾನ್ಸರ್ ಬರದಂತೆ ತಡೆಗಟ್ಟಬಹುದು. ಹಾಗಾಗಿ ಸಮಿತಿಯ ವತಿಯಿಂದ ಉಚಿತವಾಗಿ ಹೆಣ್ಣು ಮಕ್ಕಳಿಗೆ ನೀಡಲಾಗುತ್ತಿದೆ. ಕ್ಯಾನ್ಸರ್ ಬರದಿರುವ ಬಗ್ಗೆ ಸಂಶೋಧನೆಗಳಿಂದ ದೃಢವಾಗಿದೆ. ಮಕ್ಕಳು ಪಾಲಕರು ಭಯಪಡುವ ಅಗತ್ಯವಿಲ್ಲ. ಹೆಣ್ಣು ಮಕ್ಕಳ ಭವಿಷ್ಯ, ಆರೋಗ್ಯ ರಕ್ಷಣೆ, ಕ್ಯಾನ್ಸರ್ ನಿವಾರಣೆಗೆ ಉಚಿತವಾಗಿ ಚುಚ್ಚುಮದ್ದು ನೀಡುವಂತಹ ಸೇವೆಯಲ್ಲಿ ನೀಡಲಾಗುತ್ತಿದೆ. ಸದ್ಯ ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿನಿಯರು ಹಾಗೂ ಸುತ್ತಮುತ್ತಲ ಶಾಲೆಯ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಚುಚ್ಚುಮದ್ದು ನೀಡಲಾಗುತ್ತಿದೆ ಎಂದು ಹೇಳಿದರು.
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಭವ್ಯಾ ಮಾತನಾಡಿ, ಪ್ರತಿದಿನ 200 ಮಹಿಳೆಯರು ಗರ್ಭಕಂಠ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಬೇರೆ ರೀತಿಯ ಕ್ಯಾನ್ಸರ್‌ಗೆ ಚುಚ್ಚುಮದ್ದು ಇಲ್ಲ. ಆದರೆ ಗರ್ಭಕಂಠ ಕ್ಯಾನ್ಸರ್‌ಗೆ ಲಸಿಕೆ ಇರುವುದರಿಂದ ಮುಂಚಿತವಾಗಿ ಹಾಕಿಸಿಕೊಳ್ಳಬೇಕು. ಜತೆಗೆ ಹೆಣ್ಣು ಮಕ್ಕಳು ಆಗಾಗ ತಪಾಸಣೆ ಮಾಡಿಸಿಕೊಂಡು ಜಾಗೃತರಾಗಬೇಕು. ಹಿಂಜರಿಕೆ ಮನೋಭಾವ ಬಿಟ್ಟು, ಆರೋಗ್ಯ ವಿಷಯದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಕಿವಿಮಾತು ಹೇಳಿದರು.
9 ವರ್ಷದಿಂದ 42 ವರ್ಷದ ಹೆಣ್ಣು ಮಕ್ಕಳು ಎಚ್‌ಪಿವಿ ಲಸಿಕೆ ಹಾಕಿಸಿಕೊಳ್ಳಬಹುದು. ಆದರೆ ಲೈಂಗಿಕ ಕ್ರಿಯೆಗೆ ಒಳಪಡುವ ಮೊದಲು ಲಸಿಕೆ ಹಾಕಿಸಿಕೊಂಡರೆ ಪರಿಣಾಮ ಉತ್ತಮವಾಗಿರುತ್ತದೆ. ಹಾಗಾಗಿ ಶಾಲಾ ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತಿದೆ.
ಸಿಆರ್‌ಪಿ ನಟರಾಜ್, ಪ್ರಾಂಶುಪಾಲ ಮಹದೇವ, ಕೃಷ್ಣೆಗೌಡ, ಚಂದ್ರಶೇಖರ್ ಹಾಗೂ ಸಿಬ್ಬಂದಿ ವರ್ಗದದವರು, ದೇವಾಲಯ ಸಮಿತಿಯ ಸದಸ್ಯರು ಇತರರು ಇದ್ದರು.