ಜಿಲ್ಲೆ

ಗೊಂಬೆಯಾಟ ಕಲೆ ಉಳಿಸುವ ಕೆಲಸವಾಗಲಿ

Udupi

ಗಂಗೊಳ್ಳಿ: ಗೊಂಬೆಯಾಟ ಕಲೆಯನ್ನು ಎಲ್ಲರೂ ಸೇರಿ ಉಳಿಸಬೇಕು. ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಗೊಂಬೆಯಾಟದ ಮಾಹಿತಿ ನೀಡುವಂತಹ ಫೋಟೋ ಗ್ಯಾಲರಿ ಪ್ರಾರಂಭಿಸುವ ಮೂಲಕ ಈ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಮುಂದಾಗಿರುವುದು ಪ್ರಶಂಸನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.

ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆ ಮನೆಯಲ್ಲಿ ಇತ್ತೀಚೆಗೆ ಫೋಟೋ ಗ್ಯಾಲರಿ ಉದ್ಘಾಟಿಸಿ ಮಾತನಾಡಿದರು.

ಉಪ್ಪಿನಕುದ್ರು ಗೊಂಬೆಯಾಟ ಟ್ರಸ್ಟ್‌ನ ನವೀಕೃತ ವೆಬ್‌ಸೈಟನ್ನು ಕೆನರಾ ಬ್ಯಾಂಕಿನ ನಿವೃತ್ತ ಮ್ಯಾನೇಜರ್ ಬಿ.ಆರ್.ನರಸಿಂಹ ರಾವ್ ಉಡುಪಿ ಉದ್ಘಾಟಿಸಿದರು.

ಇದೇ ಸಂದರ್ಭ ಬಿ.ಆರ್.ನರಸಿಂಹ ರಾವ್ ಅವರನ್ನು ಗೊಂಬೆಯಾಟ ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉಪ್ಪಿನಕುದ್ರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದ ಯು.ಕಾರ್ತಿಕ್ ಐತಾಳ್ ಮತ್ತು 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕುಂದಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಸ್ಥಾನ ಪಡೆದ ಬಿ.ಪನ್ನಗ ಮಯ್ಯ ಅವರನ್ನು ಸನ್ಮಾನಿಸಲಾಯಿತು.

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿವೃತ್ತ ಹಿರಿಯ ಶಾಖಾ ನಿರೀಕ್ಷಕ ವಿಶ್ವಂಭರ ಐತಾಳ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಬೈಂದೂರು ವಲಯದ ಕಾರ್ಯದರ್ಶಿ ಡಾ.ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ಅಕಾಡೆಮಿಯ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಸ್ವಾಗತಿಸಿದರು. ಶಿಕ್ಷಕ ನಾಗೇಶ್ ಶ್ಯಾನುಭಾಗ್ ನಿರೂಪಿಸಿದರು. ಶಿಕ್ಷಕ ಉದಯ ಭಂಡಾರ್‌ಕಾರ್ ವಂದಿಸಿದರು.