ಹುಬ್ಬಳ್ಳಿ: ಇಲ್ಲಿಯ ಶಿರಡಿನಗರದ ಡಾ.ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಬಾಲಕರ ವಸತಿ ನಿಲಯದ ವಿದ್ಯಾರ್ಥಿಯೊಬ್ಬರು ಬುಧವಾರ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ವಿಜಯಪುರದ ರಾಕೇಶ ಶ್ರೀಶೈಲ ಜಂಬಲದಿನ್ನಿ (22) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ರಾಕೇಶ ಬುಧವಾರ ಸಂಜೆ ಹಾಸ್ಟೆಲ್ ಕೊಠಡಿಯಲ್ಕಿ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಬಿಇ 6 ನೇ ಸೆಮಿಸ್ಟರ್ ಓದುತ್ತಿದ್ದ ರಾಕೇಶ, ಆನ್‌ಲೈನ್ ಗೇಮ್ ಆಡುತ್ತಿದ್ದ. ಇದರಲ್ಲಿ ಹಣವನ್ನೂ ಕಳೆದುಕೊಂಡಿದ್ದ ಎಂದು ರಾಕೇಶ ಸ್ನೇಹಿತರು ಹೇಳುತ್ತಿದ್ದಾರೆ. ಮೃತದೇಹವನ್ನು ಕಿಮ್ಸ್ ಶವಾಗಾರದಲ್ಲಿರಿಸಲಾಗಿತ್ತು. ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು, ‘ಮೊಬೈಲ್ ಆ್ಯಪ್‌ಗಳಲ್ಲಿ ಗೇಮ್ ಆಡುತ್ತಿದ್ದ. ಅದರಲ್ಲಿ ಹಣ ಕಳೆದುಕೊಂಡಿದ್ದ ಎಂದು ಸ್ನೇಹಿತರು ಹೇಳುತ್ತಿದ್ದಾರೆ. ಈ ಬಗ್ಗೆ ಆತನ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುವುದು’ ಎಂದು ತಿಳಿಸಿದ್ದಾರೆ.