ತಿ.ನರಸೀಪುರ: ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈಯಲು ವಿದ್ಯಾರ್ಥಿಗಳು ಯಾವುದೇ ಒತ್ತಡಕ್ಕೊಳಗಾಗದೆ ಕಲಿಕೆ ವಿಷಯದ ಆಯ್ಕೆ ಐಚ್ಛಿಕವಾಗಿರಲಿ. ಜೀವನದಲ್ಲಿ ಸಾಧಿಸುವ ಮುಂದಿನ ಗುರಿ ನಿರ್ದಿಷ್ಟವಾಗಿರಲಿ ಎಂದು ಸಂಸದ ಸುನೀಲ್ ಬೋಸ್ ತಿಳಿಸಿದರು.
ತಾಲೂಕಿನ ಬನ್ನೂರು ಪಟ್ಟಣದ ಸಂತೆ ಮಾಳದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ 2024-25ನೇ ಶೈಕ್ಷಣಿಕ ಸಾಲಿನ ಸಹಪಠ್ಯ ಚಟುವಟಿಕೆ ಉದ್ಘಾಟನೆ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು. ಕಲಿಯುವ ವಯಸ್ಸು ಮತ್ತೆ ಸಿಗಲ್ಲ. ಹಾಗಾಗಿ ಕಲಿಯುವ ಉತ್ಸಾಹದೊಂದಿಗೆ ವಿದ್ಯಾರ್ಥಿ ಬದುಕನ್ನು ಪೂರ್ಣವಾಗಿ ಅನುಭವಿಸಿ ಬಿಡಬೇಕು ಎಂದು ಕಿವಿಮಾತು ಹೇಳಿದರು.
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಕಲಿಯುವ ಬೌದ್ಧಿಕ ಸಾಮರ್ಥ್ಯ ವಿಭಿನ್ನವಾಗಿರುತ್ತದೆ. 45 ನಿಮಿಷಗಳಷ್ಟೇ ನಮ್ಮ ಮಿದುಳಿಗೆ ಯಾವುದೇ ವಿಷಯವನ್ನು ಗ್ರಹಿಸುತ್ತದೆ. ಕಲಿಕೆಯಲ್ಲಿ ಒತ್ತಡ ಬೇಡ. ಇಷ್ಟವಾಗುವ ವಿಷಯವನ್ನು ಆಯ್ಕೆ ಮಾಡಿಕೊಂಡು, ನಿರಂತರ ಅಧ್ಯಯನ ಮೂಲಕ ವ್ಯಾಸಂಗವನ್ನು ಪೂರ್ಣಗೊಳಿಸಿ. ಕ್ರೀಡಾಕೂಟಗಳು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಹುಮ್ಮಸ್ಸಿನಿಂದ ಭಾಗವಹಿಸಿ, ಶಿಕ್ಷಣದಿಂದ ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.
ಪ್ರೋತ್ಸಾಹ ಧನ ಘೋಷಣೆ: ಕಳೆದ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ನಾಲ್ವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದ ಸಂಸದ ಸುನೀಲ್ ಬೋಸ್ ಅವರು ವೇದಿಕೆಯಲ್ಲಿ ವಿದ್ಯಾರ್ಥಿಗಳ ಮುಂದಿನ ಶಿಕ್ಷಣಕ್ಕೆ ನೆರವು ನೀಡಲು ನಾಲ್ವರಿಗೂ ತಲಾ 15,000 ರೂ. ಪ್ರೋತ್ಸಾಹ ಧನವನ್ನು ಘೋಷಣೆ ಮಾಡಿ, ಪ್ರತಿಭಾನ್ವಿತ ವಿದ್ಯಾರ್ಥಿಗಳ ಬೆನ್ನು ತಟ್ಟಿದರು.
ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪಗೌಡ ಮಾತನಾಡಿ, ಯುವ ಜನತೆಯಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ನೈತಿಕ ಮೌಲ್ಯಗಳು ಕ್ಷೀಣಿಸುತ್ತಿರುವ ಕಾಲಘಟ್ಟದಲ್ಲಿ ನಾವೆಲ್ಲರೂ ಇರುವುದರಿಂದ ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕೃತಿ ಹಾಗೂ ಸಂಸ್ಕಾರ ಎರಡನ್ನೂ ಕಲಿಸಬೇಕಿದೆ. ಶಿಕ್ಷಣ ವಿಷಯದ ಆಯ್ಕೆಯನ್ನು ಪಾಕರು ಮಕ್ಕಳ ವಿವೇಚನೆಗೆ ಬಿಡಬೇಕು. ಶಾಲಾ-ಕಾಲೇಜುಗಳಲ್ಲಿ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆ ಮುಖ್ಯವಾಗಿರುವುದರಿಂದ ವಿದ್ಯಾರ್ಥಿಗಳು ಎರಡರಲ್ಲೂ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷ ಮುನಾವರ್ ಪಾಷ, ಲಕ್ಷ್ಮೀನಾರಾಯಣ, ಮಾಜಿ ಉಪಾಧ್ಯಕ್ಷ ಬಿ.ಎಸ್.ರಾಮಲಿಂಗೇಗೌಡ, ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಮರಿಸ್ವಾಮಿ, ಸಹಾಯಕ ಪ್ರಾದ್ಯಾಪಕ ಡಾ.ಬಿ.ಕೆ.ಜ್ಞಾನಪ್ರಕಾಶ್, ಮೈಮುಲ್ ನಿರ್ದೇಶಕ ಆರ್.ಚಲುವರಾಜು, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಕೆ.ವಜ್ರೇಗೌಡ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ.ಸಿ.ನಂದೀಶ್, ಪ್ರಾಂಶುಪಾಲ ಗೂಳೇಗೌಡ, ಉಪ ಪ್ರಾಂಶುಪಾಲೆ ಬಟ್ಟಮ್ಮ, ಸದಸ್ಯ ಎಚ್.ಎಂ.ಮಹದೇವು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚನ್ನಕೇಶವ, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎ.ಎನ್.ಸ್ವಾಮಿ, ಕಾರ್ಮಿಕ ಅಧ್ಯಕ್ಷ ಶಿವಸಿದ್ದು, ಮಹಿಳಾ ಅಧ್ಯಕ್ಷೆ ವೀಣಾ ಶಿವಕುಮಾರ್, ಗ್ರಾ.ಪಂ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ದರಖಾಸ್ತು ಸಮಿತಿ ಸದಸ್ಯ ಮರಿಗೌಡ, ಎಸ್ಸಿ/ಎಸ್ಟಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಕೆ.ಮಲ್ಲು, ಉಪನ್ಯಾಸಕರಾದ ಪ್ರಭುಸ್ವಾಮಿ, ಎಸ್.ಭಾಗ್ಯಲಕ್ಷ್ಮೀ, ಮುಖಂಡರಾದ ಬಸವನಹಳ್ಳಿ ಮಹೇಂದ್ರ, ಟಿ.ಎಸ್.ಲೋಕೇಶ, ನಾಗೇಶ, ರಂಜಿತಾ, ದಾಸೇಗೌಡ, ಹಾಗೂ ಇನ್ನಿತರರು ಹಾಜರಿದ್ದರು.