ಜಿಲ್ಲೆ

ಮಕ್ಕಳ ಮುಂದೆ ಸುಸಂಸ್ಕೃತರಾಗಿ ವರ್ತಿಸಿ

ನಾಗಮಂಗಲ: ಮಕ್ಕಳ ಮುಂದೆ ಪಾಲಕರು ದಿನನಿತ್ಯ ಕಿತ್ತಾಟ, ಜಗಳ ಮಾಡುವ ಜತೆಗೆ ಕೆಟ್ಟಪದಗಳನ್ನು ಬಳಸುವುದನ್ನು ನಿಲ್ಲಿಸಿ ಸುಸಂಸ್ಕೃತರಾಗಿ ವರ್ತಿಸಿದಾಗ ಮಕ್ಕಳು ಸಹ ಸುಸಂಸ್ಕೃತರಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಪಟ್ಟಣದ ಒಕ್ಕಲಿಗರ ಸಂಘದ ಕುವೆಂಪು ಪ್ರಾಥಮಿಕ ಮತ್ತು ಪ್ರೌಢಶಾಲೆಯ ವತಿಯಿಂದ ಗುರುವಾರ ಆಯೋಜಿಸಿದ್ದ 6ನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಮನಸ್ಸು ಹೂವಿಗಿಂತ ಮೃದುವಾಗಿದ್ದು ಅವರ ಮನಸ್ಸಿನ ಮೇಲೆ ಬಾಲ್ಯಾವಸ್ಥೆಯಲ್ಲಿ ಪಾಲಕರು ಯಾವುದನ್ನು ಮೈಗೂಡಿಸುತ್ತಾರೆ ಅದರಂತೆ ಭವಿಷ್ಯ ರೂಪಿತಗೊಳ್ಳುತ್ತದೆ. ಮಕ್ಕಳ ಮನಸ್ಸನ್ನು ಸರಿದಾರಿಯತ್ತ ಕೊಂಡೊಯ್ಯುವ ಜವಾಬ್ದಾರಿ ಪ್ರತಿಯೊಬ್ಬ ಪಾಲಕರದ್ದು ಎಂದು ತಿಳಿಸಿದರು.

ಮಕ್ಕಳಿಂದಾಗುವ ತಪ್ಪುಗಳಿಗೆ ಶಾಲೆಗಳಿಗೆ ಬಂದು ಶಿಕ್ಷಕರ ಜತೆ ಪಾಲಕರು ಜಗಳವಾಡುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ಆದರೆ ಜಗಳವಾಡಿ ಹೋದ ನಂತರ ವರ್ಷವಿಡೀ ತಮ್ಮ ಮಗು ಅದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಬೇಕಿರುತ್ತದೆ ಎಂಬುದನ್ನು ಪಾಲಕರು ಅರಿಯಬೇಕು. ಆದ್ದರಿಂದ ಪ್ರತಿಯೊಬ್ಬ ಪಾಲಕರು ತಮ್ಮ ಮಗು ಮಾಡುವ ತಪ್ಪಿನ ಬಗ್ಗೆ ಸೂಕ್ಷ್ಮವಾಗಿ ಗಮನವಿಡಬೇಕು ಎಂದು ತಿಳಿಸಿದರು.


ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ 4 ವಿದ್ಯಾರ್ಥಿಗಳನ್ನು ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಎಐಎಂಎಸ್ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮು, ಬಿಇಒ ಜಗದೀಶ್, ತಾ.ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಮಂಜುನಾಥ್, ಮುಖ್ಯ ಶಿಕ್ಷಕ ಕುಮಾರ್, ಶಿವಣ್ಣಗೌಡ ಇತರರು ಉಪಸ್ಥಿತರಿದ್ದರು.