ಜಿಲ್ಲೆ

ಸ್ವಾಭಿಮಾನಿಗಳಾಗಿ, ಆದರ್ಶವಾಗಿ ಬಾಳಿ

ರಾಜಣ್ಣ

ಕುಶಾಲನಗರ: ಸಂಘಟನೆಯಿಂದ ಸಶಕ್ತರಾಗಿ, ವಿದ್ಯಾರ್ಜನೆಯಿಂದ ಬಲಿಷ್ಠರಾಗಿ, ಸ್ವಾಭಿಮಾನಿಗಳಾಗಿ ಸಮಾಜದಲ್ಲಿ ಬದುಕು ಕಟ್ಟಿಕೊಂಡು ಆದರ್ಶವಾಗಿ ಬಾಳಿ ಎಂದು ಬಿಲ್ಲವ ಸಮಾಜದ ಪ್ರಮುಖ ಸತ್ಯಜಿತ್ ಸುರತ್ಕಲ್ ಸಮುದಾಯದ ಜನರಿಗೆ ಸಲಹೆ ನೀಡಿದರು.


ಕುಶಾಲನಗರದ ಕೋಟಿ ಚನ್ನಯ್ಯ ಬಿಲ್ಲವ ಸಮಾಜದ ವತಿಯಿಂದ ಭಾನುವಾರ ಎಪಿಸಿಎಂಎಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ 23ನೇ ವಾರ್ಷಿಕೋತ್ಸವ ಹಾಗೂ ಗುರುನಮನ ಕಾರ್ಯಕ್ರಮದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.


ಕೇರಳದಲ್ಲಿ ನಾರಾಯಣ ಗುರುಗಳು ಅಕ್ಷರ ಕ್ರಾಂತಿಯನ್ನುಂಟು ಮಾಡಿದರಲ್ಲದೆ, ದಲಿತ ದೇವಾಲಯಗಳನ್ನು ಪ್ರತ್ಯೇಕವಾಗಿ ನಿರ್ಮಿಸಿದ್ದರು. ಬಿಲ್ಲವ ಸಮಾಜವೂ ತನ್ನದೇ ಆದ ಸಾಂಸ್ಕೃತಿಕ ಛಾಪು ಹೊಂದಲು ಮಹರ್ಷಿ ನಾರಾಯಣ ಗುರುಗಳ ಆಶೀರ್ವಾದವೇ ಕಾರಣ ಎಂದರು.


ಸಂಘದ ಅಧ್ಯಕ್ಷ ಸುಧೀರ್ ಮಾತನಾಡಿ, ಸಂಘದ ವತಿಯಿಂದ ವಿವಿಧ ಅಬಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದ್ದು, ಮಕ್ಕಳ ಶೈಕ್ಷಣಿಕ ಮತ್ತು ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಾರ್ಷಿಕೋತ್ಸವ ಮತ್ತು ಗುರು ನಮನ ಕಾರ್ಯಕ್ರಮದ ಅಂಗವಾಗಿ ವಿವಿಧ ಮಾದರಿಯ ಕ್ರೀಡಾಕೂಟ ಏರ್ಪಡಿಸಲಾಗಿದೆ ಎಂದು ತಿಳಿಸಿದರು.


ಕಾರ್ಯಕ್ರಮಕ್ಕೂ ಮೊದಲು ಗುರುಗಳ ಭಾವಚಿತ್ರವಿರಿಸಿದ್ದ ಅಲಂಕೃತ ಮಂಟಪವನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಸಂಘದ ಗೌರವಾಧ್ಯಕ್ಷ ಗಂಗಾಧರ್, ಉಪಾಧ್ಯಕ್ಷೆ ಕುಸುಮಾವತಿ, ಕಾರ್ಯದರ್ಶಿ ಅಣ್ಣು ಪೂಜಾರಿ, ಸಹಕಾರ್ಯದರ್ಶಿ ಅರುಣ್, ಖಜಾಂಚಿ ಆಶಾ ಮತ್ತಿತರರು ಪಾಲ್ಗೊಂಡಿದ್ದರು.