ಜಿಲ್ಲೆ

ಚಿತ್ರರಂಗದ ಸಮಸ್ಯೆಗಳಿಗೆ ಸ್ಪಂದನೆ ಸಿಗಲಿ...

ರಮೇಶ್​ ಕುಮಾರ್​​ ಬಿ ಎಡಮೋಳೆ

ಕನ್ನಡ ಭಾಷೆ ಜತೆಗೆ ಕನ್ನಡಿಗರ ಬದುಕು ಸಮೃದ್ಧಗೊಳಿಸುವ ಸಂಕಲ್ಪ. ಸುಸ್ಥಿರ, ಸರ್ವಾಂಗೀಣ ಅಭಿವೃದ್ಧಿ ಹಂಬಲ. ಇವೆರಡು ನೆಲೆಯ ಮೇಲೆ ಕರ್ನಾಟಕದ ಮುನ್ನೋಟ ರೂಪುಗೊಳ್ಳಬೇಕು ಎಂದು ಸಚಿವ ಮುರುಗೇಶ್​ ನಿರಾಣಿ, ಚಿತ್ರನಟಿ, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯೆ ತಾರಾ ಅನುರಾಧ ಹಾಗೂ ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಪ್ರಧಾನ ಕಾರ್ಯದರ್ಶಿ ಮಹಲಿಂಗಯ್ಯ ಆಶಿಸಿದರು. ರಾಜ್ಯೋತ್ಸವ ನಿಮಿತ್ತ ವಿಜಯವಾಣಿ ಮತ್ತು ದಿಗ್ವಿಜಯ ವಾಹಿನಿ ಹಮ್ಮಿಕೊಂಡಿದ್ದ "ನವಕರ್ನಾಟಕ ನಿರ್ಮಾಣಕ್ಕೆ ದಿಕ್ಸೂಚಿ' ಸಂವಾದದಲ್ಲಿ ಅವರು ವಿಚಾರಧಾರೆ ಹಂಚಿಕೊಂಡರು.

| ತಾರಾ ಅನುರಾಧ ನಟಿ, ಅಧ್ಯಕ್ಷರು, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ

ಕನ್ನಡವನ್ನು ಭಾಷೆಗೆ ಸೀಮಿತಗೊಳಿಸಲಾಗದು. ಬದುಕು ಕಟ್ಟಿಕೊಡುವ ಶಕ್ತಿ ಕನ್ನಡತನಕ್ಕಿದೆ. ಕನ್ನಡ ಅಂದರೆ ಅದು ಸಂಸತಿ. ಶತಶತಮಾನಗಳಿಂದಲೂ ಕನ್ನಡ ಭಾಷೆ ಉಳಿದು, ಬೆಳೆದು ಬಂದಿದೆ. ಕನ್ನಡದ ನೆಲದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಸಿಗುವ ಯೋಜನೆಗಳು ರೂಪಿತಗೊಳ್ಳಬೇಕಿದೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಹೆಜ್ಜೆ ಇರಿಸಿರುವುದು ಸಮಾಧಾನಕರ. ಸಿನಿಮಾ ರಂಗದಲ್ಲಿಯೂ ಕನ್ನಡದ ನೆಲದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎನ್ನುವುದು ನಮ್ಮೆಲ್ಲರ ಒಕ್ಕೊರಲ ಆಗ್ರಹ. ಈ ನಿಟ್ಟಿನಲ್ಲಿ ಚಿತ್ರರಂಗದ ಕಲಾವಿದರು ಸತತವಾಗಿ ಹೋರಾಟ ಮಾಡಿಕೊಂಡೇ ಬಂದಿದ್ದಾರೆ. ಆದರೆ ಅದಕ್ಕೆ ಮಾನ್ಯತೆ ನೀಡುವ ನಿಟ್ಟಿನಲ್ಲಿ ಈ ತನಕ ಕ್ರಮ ಆಗಿಲ್ಲ.

ಕೆಜಿಎಫ್​​ ಸಿನಿಮಾದಲ್ಲಿ ನಟನೆ ಮಾಡಿದವರು ಎಲ್ಲರೂ ಕನ್ನಡಿಗರೇ ಆಗಿದ್ದಾರೆ. ಆ ಸಿನಿಮಾ ಯಶಸ್ವಿಯಾಗಲಿಲ್ಲವೇ? ಹೊರರಾಜ್ಯದ ಕಲಾವಿದರನ್ನು ಕರೆತಂದು ಮಣೆ ಹಾಕುವುದನ್ನು ಮೊದಲು ಬಿಡಬೇಕು. ಇಲ್ಲಿನ ಕಲಾವಿದರಿಗೆ ಆ ಪಾತ್ರಗಳನ್ನು ನೀಡಿದರೆ ಇನ್ನೂ ಅಚ್ಚುಕಟ್ಟಾಗಿ ಮಾಡಲು ಸಾಧ್ಯವಿದೆ. ಹೊರಗಿನ ಕಲಾವಿದರನ್ನು ಹಾಕಿಕೊಂಡು ಸಿನಿಮಾ ಮಾಡಿದರೆ ಅದು ಹಿಟ್​ ಆಗುತ್ತದೆ ಎನ್ನುವುದು ತಪ್ಪು ಕಲ್ಪನೆ. ಹೊರಗಿನಿಂದ ಕಲಾವಿದರನ್ನು ಕರೆಸಿ ಅವರನ್ನು ಹೋಟೆಲ್​ನಲ್ಲಿ ಉಳಿಸಿ, ಅವರಿಗಾಗಿ ಮಾಡುವ ವೆಚ್ಚದಲ್ಲಿ ಇಲ್ಲಿನ ಹತ್ತು ಕಲಾವಿದರಿಗೆ ಸಂಭಾವನೆ ನೀಡಲು ಸಾಧ್ಯವಿದೆ. ಈ ಬಗ್ಗೆ ಚಿತ್ರರಂಗ ಯೋಚಿಸಬೇಕು. ಮಾನವೀಯ ನೆಲೆಯಲ್ಲಿಯೂ ಚಿಂತನೆ ಮಾಡಿ ಚಿತ್ರರಂಗ ಹೆಜ್ಜೆ ಇಡಬೇಕಾಗಿರುವ ತುರ್ತು ಮತ್ತು ಜವಾಬ್ದಾರಿ ಈಗ ಹೆಚ್ಚಾಗಿದೆ.

ಜನತಾ ಚಿತ್ರಮಂದಿರಗಳ ನಿರ್ಮಾಣವಾಗಲಿ: ಸರ್ಕಾರವೇ ಜನತಾ ಚಿತ್ರಮಂದಿರಗಳನ್ನು ನಿರ್ಮಾಣ ಮಾಡಬೇಕು. ಅಲ್ಲಿ ಎಲ್ಲ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂಬ ಒತ್ತಾಯ ದಶಕಗಳಿಂದ ಮಾಡುತ್ತ ಬಂದಿದ್ದೇವೆ. ಇನ್ನೂ ಆ ಬೇಡಿಕೆ ಈಡೇರಿಲ್ಲ. ಖಾಸಗಿ ಸಹಭಾಗಿತ್ವದಲ್ಲಿ ಜನತಾ ಚಿತ್ರಮಂದಿರ ನಿರ್ಮಾಣ ಮಾಡುವುದಾಗಿ ಸರ್ಕಾರ ನೀಡಿದ ಭರವಸೆಯೂ ಈ ತನಕ ಈಡೇರಿಲ್ಲ. ಪ್ರತಿ ನಗರದ ಪ್ರಮುಖ ಸ್ಥಳಗಳಲ್ಲಿ ಜನತಾ ಚಿತ್ರಮಂದಿರ ನಿರ್ಮಾಣ ಮಾಡಿ ಅದನ್ನು ಸರ್ಕಾರವೇ ನಡೆಸುವಂತಾಗಬೇಕು.

ಏಕಗವಾ ಯೋಜನೆ ಬೇಕು

ಚಿತ್ರೀಕರಣಕ್ಕೆ ಒಮ್ಮೆ ಅನುಮತಿ ಪಡೆದರೆ ಮತ್ತೆ ಮತ್ತೆ ಅನುಮತಿ ಬೇಕಾಗಿಲ್ಲ ಎನ್ನುವ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ಬರಬೇಕು. ಸ್ವಿಜರ್​ಲ್ಯಾಂಡ್​, ಗೋವಾ ಸೇರಿದಂತೆ ಹಲವೆಡೆ ಈ ರೀತಿಯ ವ್ಯವಸ್ಥೆ ಇದೆ. ಆದರೆ, ನಮ್ಮಲ್ಲಿ ಪ್ರತಿಯೊಂದಕ್ಕೂ ಅನುಮತಿ ಪಡೆದುಕೊಳ್ಳಬೇಕಾದ ಸ್ಥಿತಿ ಇದೆ. ಈ ನಿಟ್ಟಿನಲ್ಲಿ ಹಲವು ಬಾರಿ ಸರ್ಕಾರದ ಗಮನ ಸೆಳೆದಿದ್ದೇವೆ. ಈ ವ್ಯವಸ್ಥೆ ಬದಲಾಗಿ ಏಕಗವಾ ಯೋಜನೆ ಜಾರಿಗೆ ಬರಬೇಕು.