ಶೃಂಗೇರಿ: ಮೂರು ವರ್ಷ ಅತಿವೃಷ್ಟಿ ಮತ್ತು ಕಳೆದ ವರ್ಷ ಅನಾವೃಷ್ಟಿಯಿಂದ ತಾಲೂಕಿನಲ್ಲಿ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಎಲ್ಲ ಇಲಾಖೆ ಅಧಿಕಾರಿಗಳು ವಿಶೇಷ ಕಾಳಜಿಯೊಂದಿಗೆ ಕಾರ್ಯನಿರ್ವಹಿಸಬೇಕು. ಮಳೆಗಾಲದಲ್ಲಿ ಅನಾಹುತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಸೂಚಿಸಿದರು.
ತಾಪಂನಲ್ಲಿ ಶನಿವಾರ ಪ್ರಕೃತಿ ವಿಪತ್ತು ನಿರ್ವಹಣೆ ಕುರಿತು ನಡೆಸಲಾದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕೆಲವೇ ದಿನಗಳಲ್ಲಿ ಮಳೆ ಪ್ರಾರಂಭವಾಗಲಿದ್ದು, ಅಧಿಕಾರಿಗಳು ಮೊಬೈಲ್ ಸ್ವಿಚ್ ಆ್ ಮಾಡದೆ ಕರೆಗಳನ್ನು ಸ್ವೀಕರಿಸಿ ತಕ್ಷಣ ಸ್ಪಂದಿಸಬೇಕು. ತಂಡಗಳನ್ನು ರಚಿಸಿ ಕಾರ್ಯನಿರ್ವಹಿಸಬೇಕು ಎಂದರು.
ಮನೆ ಹಾಗೂ ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದರೆ ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ತೆರವುಗೊಳಿಸಬೇಕು. ರೈತರ ಬೆಳೆ ಹಾನಿ ಮತ್ತು ಪ್ರಾಣಹಾನಿಗಳಿಗೆ ಸಿಗಬೇಕಾದ ಪರಿಹಾರ ಒದಗಿಸಲು ಹಾನಿಯ ಪ್ರಮಾಣ ಕುರಿತು ವಿವರ ವರದಿ ಸಲ್ಲಿಸಬೇಕು ಎಂದು ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ದೂರವಾಣಿ ಇಲಾಖೆ ಅಧಿಕಾರಿಗಳು ಕರೆಂಟ್ ಇಲ್ಲದ ಸಂದರ್ಭದಲ್ಲಿ ಟವರ್ ಜನರೇಟರ್‌ಗೆ ಡೀಸೆಲ್ ಇಲ್ಲ ಎಂದು ನೆಟ್‌ವರ್ಕ್ ಇಲ್ಲದಂತೆ ಮಾಡಿ ನೆಪಹೇಳಿ ಜಾರಿಕೊಳ್ಳಬಾರದು. ವಿದ್ಯುತ್ ಕಂಬ, ಟಿಸಿ ಹಾಗೂ ಲೈನ್‌ಗಳ ದುರಸ್ತಿ ಮಾಡಬೇಕು ಹಾಗೂ ಬೇಕಾದ ಸಾಮಗ್ರಿಗಳನ್ನು ದಾಸ್ತಾನು ಮಾಡಿ ತುರ್ತು ಸಂದರ್ಭದಲ್ಲಿ ಕೂಡಲೇ ಸ್ಪಂದಿಸಬೇಕು ಎಂದರು.
ಆರೋಗ್ಯ ಇಲಾಖೆಯವರು ಮಳೆಗಾಲದಲ್ಲಿ ತುರ್ತು ಚಿಕಿತ್ಸೆಗಾಗಿ ಆಂಬುಲೆನ್ಸ್ ಹಾಗೂ ಔಷಧ ಸಿದ್ಧಪಡಿಸಿಟ್ಟುಕೊಂಡಿರಬೇಕು. ಯಾವ ಔಷಧದ ಕೊರತೆ ಉಂಟಾದರೆ ಕೂಡಲೇ ಜಿಲ್ಲಾ ಕೇಂದ್ರದಿಂದ ತರಿಸಿಕೊಳ್ಳಬೇಕು. ತಾಪಂ, ಪಪಂ ಅಧಿಕಾರಿಗಳು, ಪಿಡಬ್ಲುೃಡಿ ಇಂಜಿನಿಯರ್ ಜತೆ ಚರ್ಚಿಸಿ ಒಳಚರಂಡಿ ಸ್ವಚ್ಛಗೊಳಿಸಬೇಕು. ಧರೆ ಕುಸಿದು ರಸ್ತೆಗಳು ಬ್ಲಾಕ್ ಆದಾಗ ಅಧಿಕಾರಿಗಳು ರಸ್ತೆ ಸಂಪರ್ಕ ಕಲ್ಪಿಸಬೇಕು ಎಂದರು.
ತಾಲೂಕಿನಲ್ಲಿ ಅತಿವೃಷ್ಟಿ ಎದುರಿಸಲು ತಯಾರಿ ಮಾಡಿಕೊಂಡಿರುವ ಸಂಪೂರ್ಣ ಮಾಹಿತಿಯನ್ನು ತಾಪಂ ಇಒ ಸುದೀಪ್ ಶಾಸಕರಿಗೆ ವಿವರಿಸಿದರು. ತಹಸೀಲ್ದಾರ್ ಪಿ.ಗೌರಮ್ಮ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.