ವಿಜಯಪುರದ ಜಿಲ್ಲಾಧಿಕಾರಿಗಳ ಕೇಸ್ವಾನ್​ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಸಂಬಂಧಿಸಿದ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್​ ಮಾತನಾಡಿದರು. ರಿಷಿ ಆನಂದ, ಸೋಮಲಿಂಗ ಗೆಣ್ಣುರ ಇದ್ದಾರೆ. 
ಜಿಲ್ಲೆ

ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿ

ಗಿರೀಶ ಸಗರ

ವಿಜಯಪುರ: ಮಳೆಗಾಲ ಪ್ರಾರಂಭವಾಗಿರುವುದರಿಂದ ಎದುರಾಗಬಹುದಾದ ತುರ್ತು ಪರಿಸ್ಥಿತಿ&ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್​ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕೇಸ್ವಾನ್​ ಕಚೇರಿ ಸಭಾಂಗಣದಲ್ಲಿ ಶನಿವಾರ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ನಿಯೋಜಿಸಲಾದ ನೋಡಲ್​ ಅಧಿಕಾರಿಗಳು ಹಾಗೂ ವಿವಿಧ ತಾಲೂಕು ತಹಸೀಲ್ದಾರ್​, ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಎಲ್ಲ ರೀತಿಯಿಂದಲೂ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕು. ಜನ&ಜಾನುವಾರುಗಳ ರಕ್ಷಣೆ, ಪುರ್ನವಸತಿ, ಪರಿಹಾರ ಕೇಂದ್ರಗಳ ಸ್ಥಾಪನೆ, ರಕ್ಷಣಾ ಸಾಮಗ್ರಿ, ನುರಿತ ಈಜುಗಾರರು, ಹಾವಾಡಿಗರು ಸೇರಿ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ತಿಳಿಸಿದರು.

ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕಾಗಿ ನೇಮಿಸಲಾದ ನೋಡಲ್​ ಅಧಿಕಾರಿಗಳು, ಸಂಬಂಧಿಸಿದ ತಾಲೂಕುಗಳಿಗೆ ಭೇಟಿ ನೀಡಿ ಗ್ರಾಮಗಳ ಪರಿಸ್ಥಿತಿ ಅವಲೋಕಿಸಬೇಕು. ಪ್ರತಿ ವಾರಕ್ಕೊಮ್ಮೆ ಸಭೆ ನಡೆಸುವ ಮೂಲಕ ತಾಲೂಕುಗಳಲ್ಲಿ ನಡೆದ ಸಭೆಗಳ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಸಭೆಗಳಲ್ಲಿ ಅಗತ್ಯ ಸಲಹೆ ಸೂಚನೆ ನೀಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಪ್ರವಾಹ ಪೀಡಿತ ಪ್ರದೇಶಗಳನ್ನು ಮುಂಚಿತವಾಗಿಯೇ ಗುರುತಿಸಬೇಕು. ನದಿ ಪಾತ್ರದ ಗ್ರಾಮಗಳಲ್ಲಿ ಡಂಗೂರ ಸೇರಿ ಸ್ವಚ್ಛವಾಹಿನಿ ಮೂಲಕ ಜನಜಾಗೃತಿ ಮೂಡಿಸಬೇಕು. ಕೆರೆ ತುಂಬಿದ ಸಂದರ್ಭ ಆಯಾ ಪ್ರದೇಶದ ಜನರು ಕೆರೆಗಳಿಗೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಬೇಕು. ಪ್ರವಾಹ ಪರಿಸ್ಥಿತಿ ವೇಳೆ ಜನ&ಜಾನುವಾರುಗಳನ್ನು ಸುರತ ಸ್ಥಳಗಳಿಗೆ ಸ್ಥಳಾಂತರಿಸಲು& ಕಾಳಜಿ ಕೇಂದ್ರ ಸ್ಥಾಪಿಸಲು ಸೂಕ್ತ ಸ್ಥಳಗಳನ್ನು ಗುರುತಿಸಬೇಕು. ಈಗಾಗಲೇ, ಜಿಲ್ಲಾಮಟ್ಟದಲ್ಲಿ ಸಹಾಯವಾಣಿ ಕಾರ್ಯನಿರ್ವಹಿಸುತ್ತಿದ್ದು, ತಾಲೂಕು ಮಟ್ಟದಲ್ಲಿಯೂ ಆರಂಭಿಸಲು ಕ್ರಮ ವಹಿಸುವಂತೆ ತಿಳಿಸಿದರು.

ಪ್ರವಾಹ ಎದುರಾದ ಸಂದರ್ಭ ನಿತ್ಯ ಗ್ರಾಮದ ಪರಿಸ್ಥಿತಿ ಕುರಿತು ವರದಿ ಸಲ್ಲಿಸಬೇಕು. ಪರಿಹಾರ ಕಾರ್ಯ ಕೈಗೊಳ್ಳಬೇಕು. ಪ್ರಕೃತಿ ವಿಕೋಪ ಪರಿಹಾರ ಕಾರ್ಯದಲ್ಲಿ ಯಾವುದೇ ಲೋಪವಾದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಳೆಗಾಲ ವೇಳೆ ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿದ್ದು ಮುಂಚಿತವಾಗಿಯೇ ನಿಯಂತ್ರಣಕ್ಕಾಗಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಮಳೆ ನೀರು ಒಂದೆಡೆ ನಿಲ್ಲದಂತೆ ನೋಡಿಕೊಳ್ಳಲು ಜನರಲ್ಲಿ ಸೂಕ್ತ ಜಾಗೃತಿ ಮೂಡಿಸಬೇಕು. ಮಳೆಗಾಲದಲ್ಲಿ ಗಿಡ&ಮರಗಳು ಬಿದ್ದು, ಯಾವುದೇ ಹಾನಿ ಸಂಭವಿಸದಂತೆ ಇಂತಹ ಪ್ರದೇಶಗಳಲ್ಲಿ ಅಗತ್ಯ ಕ್ರಮ ವಹಿಸಬೇಕು. ಮಳೆ&ಗಾಳಿ ರಭಸಕ್ಕೆ ವಿದ್ಯುತ್​ ತಂತಿ ಹರಿದು ಬಿದ್ದಾಗ ಹೆಸ್ಕಾಂ ಇಲಾಖೆ ಅಧಿಕಾರಿಗಳು ತಕ್ಷಣ ಅವುಗಳನ್ನು ತೆರವುಗೊಳಿಸಲು ಮುಂದಾಗಬೇಕು. ಪ್ರವಾಹ ಪರಿಸ್ಥಿತಿ ಸಂದರ್ಭ ಹಾನಿ ಉಂಟಾದಲ್ಲಿ ನಿಗದಿತ ಕಾಲಾವಧಿಯಲ್ಲಿ ಪರಿಹಾರ ಒದಗಿಸಲು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.

ಗ್ರಾಮ ಪಂಚಾಯಿತಿ, ನಗರ ಸ್ಥಳಿಯ ಸಂಸ್ಥೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಪಾಲಿಕೆ ವ್ಯಾಪ್ತಿಯ ವಿಫಲ ಕೊಳವೆ ಬಾವಿಗಳನ್ನು ಗುರುತಿಸಿ, ಸ್ಲಾಬ್​ ಮತ್ತು ಕಾಂಕ್ರಿಟ್​ ಹಾಕಿ ಮುಚ್ಚಲು ಕ್ರಮ ವಹಿಸಬೇಕು.

ಯಾವುದೇ ಅಹಿತಕರ ಟನೆ ಸಂಭವಿಸದಂತೆ ನೋಡಿಕೊಳ್ಳಬೇಕು. ಈ ಕಾರ್ಯದಲ್ಲಿ ಅಧಿಕಾರಿಗಳು ರ್ನಿಲಕ್ಷ ತೋರಿದಲ್ಲಿ ಯಾವುದೇ ಟನೆ ಸಂಭವಿಸಿದ್ದಲ್ಲಿ ಅವರನ್ನೇ ಹೊಣೆಗಾರನ್ನಾಗಿಸಿ ಕ್ರಮ ವಹಿಸಲಾಗುವುದೆಂದು ಖಡಕ್​ ಎಚ್ಚರಿಕೆ ನೀಡಿದರು.

ಭೀಮಾ, ಕೃಷ್ಣಾ ಹಾಗೂ ಡೋಣಿ ನದಿಗಳಲ್ಲಿ ಎದುರಾಗಬಹುದಾದ ಪ್ರವಾಹದ ಪರಿಸ್ಥಿತಿ ಎದುರಿಸಲು, ತುರ್ತು ಸಂದರ್ಭಗಳಲ್ಲಿ ಪುನರ್ವಸತಿಗೆ ಪರಿಹಾರ ಕೇಂದ್ರಗಳ ಸ್ಥಾಪನೆ ಸೇರಿ ರಕ್ಷಣಾ ಕಾರ್ಯ ತುರ್ತು ಮುಂಜಾಗ್ರತಾ ಕ್ರಮ ಕೈಗೊಳ್ಳಲು ವಿಪತ್ತು ನಿರ್ವಹಣಾ ಕಾಯ್ದೆ 2005ರನ್ವಯ ತಾಲೂಕು ನೋಡಲ್​ ಅಧಿಕಾರಿಗಳೆಂದು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಜಿ.ಪಂ. ಸಿಇಒ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಇಂಡಿ ಉಪವಿಭಾಗಾಧಿಕಾರಿ ಅನುರಾಧಾ ವಸದ ಮತ್ತಿತರರಿದ್ದರು.